ರಾಜ್ಯಾದ್ಯಂತ ಗ್ಯಾರಂಟಿ ಕಚೇರಿಗಳ ಸ್ಥಾಪನೆ ಮಾಡಲು ತೀರ್ಮಾನ
ಬಿಜೆಪಿಯವರು ನೂರು ಜನ್ಮ ಎತ್ತಿಬಂದರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ
ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಗೇಲಿ ಮಾಡಿದ್ದ ಬಿಜೆಪಿ ನಾಯಕರು ಈಗ ಬಿಜೆಪಿಯವರು ಯಾರೂ ಗ್ಯಾರಂಟಿಯ ಲಾಭ ಪಡೆಯುವುದಿಲ್ಲ ಎಂದು ಘೋಷಣೆ ಮಾಡಲಿ ನೋಡೋಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಕಾಂಗ್ರೆಸ್ ಜನಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, “ಇಂದಿರಾ ಗಾಂಧಿ ಅವರು ವೃದ್ಧಾಪ್ಯ, ವಿಧವಾ ವೇತನ, ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೆ ಭೂಮಿ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರೈತರ ಪಂಪ್ ಸೆಟ್ ಗೆ 10 ಹೆಚ್.ಪಿ ಉಚಿತ ವಿದ್ಯುತ್ ನಂತಹ ಯೋಜನೆ ಜಾರಿ ಮಾಡೊದರು. ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನಿಸಿದರು.
ನಮ್ಮ ಕಾಲದಲ್ಲಿ ಜಾರಿಗೆ ಬಂದ ಯಾವುದಾದರೂ ಒಂದು ಯೋಜನೆ ನಿಲ್ಲಿಸಲಾಗಿದೆಯೇ? ಬಡವರಿಗೆ ನಿವೇಶನ, ಮನೆ ನೀಡುವ ಯೋಜನೆ ನಿಂತಿದೆಯೇ? ಇಲ್ಲ. ಅದೇ ರೀತಿ ಬಿಜೆಪಿಯವರು ನೂರು ಜನ್ಮ ತಳೆದರೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ” ಎಂದು ವಾಗ್ದಾಳಿ ನಡೆಸಿದರು.
“ಪದ್ಮನಾಭನಗರದಲ್ಲಿ ನಮ್ಮ ಕಾರ್ಯಕರ್ತರ ಹುಮ್ಮಸ್ಸು, ಶಕ್ತಿ ಸ್ಫೂರ್ತಿ ನೋಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ನಮ್ಮ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಮಾಡಿದ್ದೇವೆ. ನಮ್ಮ ಈ ಐದು ಗ್ಯಾರಂಟಿ ಯೋಜನೆಗಳ ಜಾರಿ ಬಂದಿದ್ದು ಯಾಕೆ? ಇವುಗಳ ಅವಶ್ಯಕತೆ ಏನು ಎಂಬುದು ಪ್ರಮುಖವಾದ ವಿಚಾರವಾಗಬೇಕು. ಅಧಿಕಾರ ಬರುತ್ತದೆ, ಹೋಗುತ್ತದೆ. ರಾಜಕಾರಣ ಎಂದ ಮೇಲೆ ಗೆಲುವು, ಸೋಲು ಇರುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಸದಾ ಜನರ ಬದುಕಿನ ಬಗ್ಗೆ ಆಲೋಚಿಸುತ್ತದೆ. ಜನರ ಬದುಕು ಕಟ್ಟುವ ಕೆಲಸ ಮಾಡುತ್ತದೆ. ಬಿಜೆಪಿ, ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ ಎಂದರು