ಮಹಾನಗರದ ಸುತ್ತಲೂ BMTC ಸಾರಿಗೆ ವ್ಯವಸ್ಥೆ ವಿಸ್ತರಣೆ: ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ
ಬೆಂಗಳೂರು: ಬೆಂಗಳೂರು ಸುತ್ತಲಿನ ನಗರಗಳಿಗೆ ಬಿಎಂಟಿಸಿ ಸೇವೆಯನ್ನು ವಿಸ್ತರಣೆ ಮಾಡುವ ಮಹತ್ವದ ಆದೇಶಕ್ಕೆ ಸಚಿವ ರಾಮಲಿಂಗಾ ರೆಡ್ಡಿ ತೀರ್ಮಾನಿಸಿದ್ದಾರೆ.
ಬೆಂಗಳೂರು ನಗರದಿಂದ ಬೆಂಗಳೂರು ಉತ್ತರ ಜಿಲ್ಲೆ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಮುಖ ನಗರ, ಪಟ್ಟಣಗಳಿಗೆ ಬಿಎಂಟಿಸಿ ಸೇವೆಯನ್ನು ವಿಸ್ತರಣೆ ಮಾಡಲಾಗುತ್ತದೆ. ಮಹಾನಗರದ ಗಡಿಭಾಗದಿಂದ 40 ಕಿ.ಮೀ.ವ್ಯಾಪ್ತಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಎರಡು ಜಿಲ್ಲೆಯ ಶಾಸಕರು ಅನೇಕ ಬಾರಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ, ಆಡಳುತ ಮಂಡಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಧಿಕೃತ ಆದೇಶವಷ್ಟೇ ಬಾಕಿಯಿದ್ದು, ಈ ನಿರ್ಧಾರದಿಂದ ಎರಡು ಜಿಲ್ಲೆಯಲ್ಲಿ ವಾಸಿಸುವ ಜನರಿಗೆ ಬೆಂಗಳೂರಿನ ಜತೆಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ ಎಂದರು.
ಎರಡು ಜಿಲ್ಲೆಗಳಲ್ಲಿ ಬೆಂಗಳೂರಿನಷ್ಟೇ ವೇಗವಾಗಿ ಕೈಗಾರಿಕೆಗಳು ಅಭಿವೃದ್ಧಿ ಆಗಿವೆ. ವಿಲ್ಲಾಗಳು, ಫ್ಲಾಟ್ ಗಳು ಬೆಳವಣಿಗೆಯಾದ ಕಾರಣ ಜನದಟ್ಟಣೆ ಹೆಚ್ಚಾಗಿದೆ. ಹೀಗಾಗಿ, ಅವರು ನಗರದ ಜತೆಗೆ ಸಂಪರ್ಕ ಸಾಧಿಸಲು ಬಸ್ ವ್ಯವಸ್ಥೆ ಕಲ್ಪಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ, ಈ ಮಹತ್ವದ ತೀರ್ಮಾನ ತೆಗದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಮನಗರ, ಚನ್ನಪಟ್ಟಣ, ಕನಕಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹೊಸ ಮಾರ್ಗಗಳನ್ನು ಆರಂಭಿಸಲಾಗುತ್ತದೆ. ನಗರದಿಂದ ಈ ಹಿಂದೆ 20 ಕಿ.ಮೀ ವ್ಯಾಪ್ತಿಗೆ ಬಸ್ ಗಳು ಸಂಚರಿಸುತ್ತಿದ್ದು, ಈಗ 40 ಕಿ.ಮೀ.ವರೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.