ಶಿವಮೊಗ್ಗ: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಟ್ ಆಗಿ, ಅಪಾರ ಪ್ರಮಾಣದ ನೀರು ನದಿ ಪಾಲಾಗಿದ್ದು ರಾಜ್ಯಸರ್ಕಾರದ ನಿದ್ದೆಗೆಡಿಸಿತ್ತು. ಇದೀಗ ಇದೇ ರೀತಿ ರಾಜ್ಯದ ಮತ್ತೊಂದು ಜಲಾಶಯ ಅಪಾಯದಲ್ಲಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಬಳಿ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಸೋರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಲಿಂಗನಮಕ್ಕಿ ಜಲಾಶಯ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ಕೊಡುಗೆ ನೀಡುತ್ತದೆ. ಲಿಂಗನಮಕ್ಕಿ ಜಲಾಶಯ ಶೇ.25ರಿಂದ ಶೇ.28ರಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿನ ನೀರು ಸೋರಿಕೆ ಆಘಾತಕ್ಕೆ ಕಾರಣವಾಗಿದೆ.
ಇನ್ನು, ಜಲಾಶಯದಲ್ಲಿನ ಸೋರಿಕೆ ಕುರಿತು ಲಿಂಗನಮಕ್ಕಿ ಜಲಾಶಯ ಪ್ರಾಧಿಕಾರ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದೆ. ಸೋರಿಕೆಯನ್ನು ರಿಪೇರಿ ಮಾಡಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ತಿಳಿಸಿದೆ ಎಂದು ತಿಳಿದುಬಂದಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಸೋರಿಕೆಯಾಗುತ್ತಿರುವುದು ಇದೇ ಮೊದಲ ಬಾರಿಯೇನು ಅಲ್ಲ. ಈ ಹಿಂದೆ 2018ರಲ್ಲಿ ಜಲಾಶಯದಲ್ಲಿ ನೀರು ಸೋರಿಕೆ ಕಂಡುಬಂದಿತ್ತು. ಆಗ ರಿಪೇರಿ ಮಾಡಲಾಗಿತ್ತು. ಆದರೆ, ಇದೀಗ ಮತ್ತೆ ಅದೇ ಸಮಸ್ಯೆ ತಲೆದೋರಿದೆ.
ಈ ಬಗ್ಗೆ ಕೆಪಿಸಿಎಲ್ನ ಕಾರ್ಯನಿರ್ವಾಹಕ ಎಂಜಿನಿಯರ್ ಮಾತನಾಡಿ, ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಸೋರಿಕೆಯಾಗುತ್ತಿರುವುದು ಕಳವಳಕಾರಿ ಸಂಗತಿ. ವಿದ್ಯುತ್ ಉತ್ಪಾದನೆಯಲ್ಲಿ ನಮಗೆ ಪ್ರತಿ ನೀರಿನ ಹನಿಯೂ ಮುಖ್ಯವಾಗುತ್ತದೆ. ನೀರು ಸೋರಿಕೆಯಾಗುತ್ತಿರುವ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು, ಅನುಮತಿಗಾಗಿ ಕಾಯುತ್ತಿದ್ದೇವೆ. ರಿಪೇರಿಗಾಗಿ ಟೆಂಡರ್ ಕೂಡ ಕರೆಯಲಾಗಿದ್ದು, ಸುಮಾರು 20 ಕೋಟಿ ರೂ. ಖರ್ಚಾಗುವ ಸಾಧ್ಯತೆ ಇದೆ ಎಂದರು.
ರಿಪೇರಿ ಮಾಡಲು ಎರಡು ವರ್ಷ ಬೇಕಾಗುತ್ತದೆ. ಮಳೆಗಾಲದಲ್ಲಿ ರಿಪೇರಿ ಮಾಡಲು ಸಾಧ್ಯವಾಗುವುದಿಲ್ಲ. ಸಂಪೂರ್ಣ ಬುಡದಿಂದ ರಿಪೇರಿ ಮಾಡಬೇಕಾಗುತ್ತದೆ. ಹೀಗಾಗಿ, ಇಷ್ಟು ಸುದೀರ್ಘ ಸಮಯ ಬೇಕಾಗುತ್ತದೆ. ಹೊರ ಹರಿವಿಕ್ಕಿಂತ ಕಡಿಮೆ ಮಿತಿಯಲ್ಲೇ ನೀರು ಸೋರಿಕೆಯಾಗುತ್ತಿದೆ. ಸೋರಿಕೆಯಾದ ನೀರು ತಲಕಾಲೆ ಜಲಾಶಯ ಸೇರುತ್ತಿದೆ. ಸೋರಿಕೆಯಾದ ನೀರಿನಿಂದ ಅಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.
ಈ ಬಗ್ಗೆ ಓರ್ವ ನಿವೃತ್ತ ಕೆಪಿಸಿಎಲ್ ಇಂಜಿನಿಯರ್ ಮಾತನಾಡಿ, ಕಳೆದ 4-5 ವರ್ಷಗಳಿಂದ ಜಲಾಶಯದಲ್ಲಿ ನೀರು ಸೋರಿಕೆಯಾಗುತ್ತಿದೆ. ನೀರು ಸೋರಿಕೆಯಿಂದ ವಿದ್ಯುತ್ ಉತ್ಪಾದನೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಜಲಾಯಶಕ್ಕೆ ಹೊಡೆತ ಬೀಳಲಿದೆ. ಹೀಗಾಗಿ, ಕೂಡಲೇ ಲಿಂಗನಮಕ್ಕಿ ಜಲಾಶಯ ರಿಪೇರಿಯಾಗಬೇಕಿದೆ ಎಂದು ಹೇಳಿದರು.