ಅಪರಾಧ ಸುದ್ದಿ

ಬೆಳಗಾವಿಯಲ್ಲಿ KSRTC ಸಿಬ್ಬಂದಿ ಮೇಲೆ ಪುಂಡಾಟ: ಮರಾಠಿ ಬರಲ್ಲ ಎಂದಿದ್ದಕ್ಕೆ ಥಳಿತ

Share It

ಬೆಳಗಾವಿ: ಮರಾಠಿಯಲ್ಲಿ ಮಾತನಾಡಲು ನನಗೆ ಬರುವುದಿಲ್ಲ, ಕನ್ನಡದಲ್ಲಿ ಹೇಳಿ ಎಂದಿದ್ದಕ್ಕೆ ಜನರನ್ನು ಕರೆಸಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ KSRTC ಸಿ ಬಸ್ ಕಂಡಕ್ಟರ್ ಮಹದೇವ ಹಲ್ಲೆಗೊಳಗಾದವರು. ಇವರಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹುಡುಗಿಯೊಬ್ಬಳು ಹುಡುಗನ ಜತೆ ಕುಳಿತಿದ್ದು, ಎರಡು ಟಿಕೆಟ್ ಕೇಳಿದ್ದರು. ಫ್ರೀ ಟಿಕೆಟ್ ಮಹಿಳೆಯರಿಗೆ ಮಾತ್ರ, ಹುಡುಗನಿಗೆ ಟಿಕೆಟ್ ಕೊಡಿ ಎಂದು ಕಂಡಕ್ಟರ್ ಕೇಳಿದ್ದರು. ಆಗ ಮರಾಠಿಯಲ್ಲಿ ಏನೇನೋ ಮಾತನಾಡಿಕೊಂಡಿದ್ದರು ಎನ್ನಲಾಗಿದೆ.

ಆಗ ಕಂಡಕ್ಟರ್ ಮಹದೇವ್, ನನಗೆ ಮಟಾಠಿ ಬರಲ್ಲ, ಕನ್ನಡದಲ್ಲಿ ಹೇಳಿ. ಅವರ ಟಿಕೆಟ್ ಹಣ ನೀಡಿ, ನಿಮ್ಮಿಬ್ಬರಿಗೆ ಬೇರೆ ಬೇರೆ ಟಿಕೆಟ್ ಕೊಡುತ್ತೇನೆ ಎಂದಿದ್ದರು. ಇದಕ್ಕೆ ಕೋಪಗೊಂಡ ಯುವಕ ಜನರನ್ನು ಕರೆಯಿಸಿ, ಬಸ್ ತಡೆದು ಮಹದೇವ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಮಹದೇವ್ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಿಸಿಪಿ ರೋಹನ್ ಜಗದೀಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕಂಡಕ್ಟರ್ ಮಹದೇವ್ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ. ಹಲ್ಲೆ ಮಾಡಿದವರ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.


Share It

You cannot copy content of this page