ಬೆಂಗಳೂರು: ತಿರುಪತಿ ದೇವಸ್ಥಾನದಲ್ಲಿರುವ ರಾಜ್ಯ ಧಾರ್ಮಿಕ ದತ್ತಿಗೆ ಸೇರಿದ ಕರ್ನಾಟಕ ರಾಜ್ಯ ಭವನದ ನವೀಕರಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಮೇ ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್ನಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಿರುಮಲದ ಏಳು ಏಕರೆ ಜಾಗದಲ್ಲಿ ಕರ್ನಾಟಕ ಭವನ ನಿರ್ಮಿಸಲಾಗಿದೆ. ಕಟ್ಟಡ ನವೀಕರಣಕ್ಕಾಗಿ ಕೈಗೊಂಡಿದ್ದ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಭವನದ ಹಳೆಬೀಡು, ಐಹೊಳೆ ಬ್ಲಾಕ್ನಲ್ಲಿ ಒಟ್ಟು 322 ಕೊಠಡಿಗಳಿದ್ದು ನವೀಕರಣ ಕಾರ್ಯ ಮುಗಿದಿದೆ. ಶ್ರೀಕೃಷ್ಣದೇವರಾಯ ಬ್ಲಾಕ್ನಲ್ಲಿ 36 ವಿವಿಐಪಿ ಕೊಠಡಿಗಳು ಹಾಗೂ ಶ್ರೀಕೃಷ್ಣರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪದ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು ಮೇ ತಿಂಗಳೊಳಗೆ ಪೂರ್ಣಗೊಳಲಿದೆ ಎಂದರು.
ತಿರುಮಲದ ಕರ್ನಾಟಕ ಭವನದಲ್ಲಿ ಮೂಲಸೌಕರ್ಯ ನಿರ್ವಹಣೆ ಸರಿಯಿಲ್ಲ. ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಹೀಗಾಗಿ ಸಿಬ್ಬಂದಿಗೆ ಕಡ್ಡಾಯವಾಗಿ ಸಮವಸ್ತ್ರ, ಗುರುತಿನ ಚೀಟಿ ಹಾಗೂ ಬಯೋಮೆಟ್ರಿಕ್ ಕಡ್ಡಾಯಗೊಳಿಸುವಂತೆ ಪರಿಷತ್ ಸದಸ್ಯ ಶರವಣ ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾಮಗಾರಿ ಪೂರ್ಣಗೊಂಡ ಬಳಿಕ ಯಾತ್ರಾರ್ಥಿಗಳ ವಾಸ್ತವ್ಯಕ್ಕಾಗಿ ಸಿಬ್ಬಂದಿ ಒಳಗೊಂಡಂತೆ ಉತ್ತಮ ಸೌಲಭ್ಯ ಕಲ್ಪಿಸುವ ಸಂಬಂಧ ಟೆಂಡರ್ ಕರೆದು ಸಂಸ್ಥೆಗೆ ಜವಾಬ್ದಾರಿ ನೀಡಲಾಗುವುದು. ಸಿಬ್ಬಂದಿಗೆ ಸಮವಸ್ತ್ರ ಧರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.