ರಾಜಕೀಯ ಸುದ್ದಿ

ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ

Share It

ಬೆಂಗಳೂರು: ಬಿಜೆಪಿ ನಾಯಕರ ನಿಯೋಗವು ಬುಧವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, “ಗ್ರೇಟರ್ ಬೆಂಗಳೂರು ಮಸೂದೆಗೆ ಅಂಕಿತ ಹಾಕಬೇಡಿ” ಎಂದು ಮನವಿ ಮಾಡಿದೆ.

ಪ್ರಸ್ತಾವಿತ ಮಸೂದೆಯು “ಅಸಂವಿಧಾನಿಕ”ವಾಗಿದ್ದು, ನಗರ ಆಡಳಿತದ ಪ್ರಜಾಪ್ರಭುತ್ವ ರಚನೆಯನ್ನು ರಕ್ಷಿಸಲು, ಬೆಂಗಳೂರಿನ ಸಾಂಸ್ಕೃತಿಕ ಗುರುತನ್ನು ಕಾಪಾಡಿಕೊಳ್ಳಲು ಮತ್ತು ದಕ್ಷ ನಗರ ಆಡಳಿತವನ್ನು ಖಚಿತಪಡಿಸಿಕೊಳ್ಳಲು ರಾಜ್ಯಪಾಲರು, ಗ್ರೇಟರ್ ಬೆಂಗಳೂರು ಮಸೂದೆ ತಿರಸ್ಕರಿಸಬೇಕು ಎಂದು ಬಿಜೆಪಿ ಕೇಳಿಕೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯನ್ನು 7 ಮಹಾನಗರ ಪಾಲಿಕೆಗಳಾಗಿ ವಿಭಜಿಸುವ ಗ್ರೇಟರ್ ಬೆಂಗಳೂರು ಮಸೂದೆಯನ್ನು ಇತ್ತೀಚೆಗೆ ರಾಜ್ಯ ವಿಧಾನಮಂಡಲದ ಎರಡೂ ಸದನಗಳಲ್ಲಿ ಅಂಗೀಕರಿಸಲಾಗಿದೆ.

ವಿಧಾನಮಂಡಲದ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರವಾಗಿದ್ದು, ಈಗ ಅದನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗುತ್ತಿದೆ. ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ನಿಯಮಾನುಸಾರವಿಲ್ಲದೆ ಅಂಗೀಕರಿಸಿರುವ ಗ್ರೇಟರ್ ಬೆಂಗಳೂರು ಮಸೂದೆ ಪರಿಷ್ಕರಿಸುವಂತೆ ಮನವಿ ಮಾಡಿದ್ದೇವೆ. ಬೆಂಗಳೂರನ್ನು ಒಡೆಯಬಾರದು.

ಈ ವಿಚಾರವನ್ನ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ರಾಜ್ಯಪಾಲರು ಸಹ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಕೀಳು ಬುದ್ಧಿಯ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ ಎಂದು ಕಿಡಿಕಾರಿದರು. ತೆರಿಗೆದಾರರ ಮೇಲೆ ಹೊರೆಯಾಗುವ ಮತ್ತು ಬೆಂಗಳೂರಿನ ಬೆಳವಣಿಗೆಗೆ ಅಡ್ಡಿಯಾಗುವ ಅನಗತ್ಯ ಮಹಾನಗರಗಳ ಮತ್ತು ಸಮಿತಿಗಳ ರಚನೆಯನ್ನು ನಿಲ್ಲಿಸುವಂತೆ ಸರ್ಕಾರವನ್ನು ವಿನಂತಿಸುತ್ತಾ, ಆಡಳಿತ ಸುಧಾರಣೆಗಳು ಕನ್ನಡಿಗ ಗುರುತು, ಸಂಪ್ರದಾಯಗಳು ಮತ್ತು ಭಾಷಾ ಪ್ರಾತಿನಿಧ್ಯವನ್ನು ದುರ್ಬಲಗೊಳಿಸದಂತೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಆರ್ಥಿಕ ಕೇಂದ್ರೀಕರಣವನ್ನು ತಡೆಗಟ್ಟಿ ನಗರದ ಅಭಿವೃದ್ಧಿಗೆ ನ್ಯಾಯಯುತ ಮತ್ತು ಪಾರದರ್ಶಕ ನಿಧಿಯ ವಿತರಣೆಯನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದರು.


Share It

You cannot copy content of this page