ನಟಿ ರನ್ಯಾ ರಾವ್ ಪ್ರಕರಣ ರದ್ದು ಕೋರಿ ಅರ್ಜಿ: ಹೆಬಿಯಾಸ್ ಕಾರ್ಪಸ್ ವಜಾ

Share It

ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್ ಬಂಧನವನ್ನು ಅಕ್ರಮವೆಂದು ಘೋಷಣೆ ಮಾಡಿ, ಬಿಡುಗಡೆ ಮಾಡಲು ಕೋರಿ ಸಲ್ಲಿಕೆಯಾಗಿದ್ದ ಹೆಬಿಯಾಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ರನ್ಯಾ ಅವರ ತಾಯಿ ಹೆಚ್.ಪಿ.ರೋಹಿಣಿ ಮತ್ತು ತರುಣ್ ತಾಯಿ ರಮಾ ರಾಜು, ಪ್ರಿಯಾಂಕಾ ಸರ್ಕಾರಿಯಾ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಹೆಬಿಯಾಸ್ ಕಾರ್ಪಸ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ.ಪಾಟೀಲ್ ಅವರಿದ್ದ ನ್ಯಾಯಪೀಠ, ಅರ್ಜಿಗಳನ್ನು ವಜಾಗೊಳಿಸಿದೆ.

ಕಳೆದ ವಿಚಾರಣೆ ವೇಳೆ, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ‘ಬಂಧನ ಆದೇಶ ಹೊರಡಿಸುವುದಕ್ಕೆ ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಪೆನ್‌ಡ್ರೈವ್ (ರನ್ಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗಿನ ವಿಡಿಯೋ ದಾಖಲೆ) ಪೂರಕವಾಗಿ ಆಧರಿಸಿದೆ.

ಆದರೆ, ಅದನ್ನು ರನ್ಯಾ ಅವರಿಗೆ ಒದಗಿಸಲಾಗಿಲ್ಲ. ರನ್ಯಾ ಅವರನ್ನು ವಶಕ್ಕೆ ಪಡೆದಾಗಲೇ ಪಾಸ್‌ಪೋರ್ಟ್ ಜಪ್ತಿ ಮಾಡಿದ್ದು, ಅದು ಸದ್ಯ ವಿಶೇಷ ನ್ಯಾಯಾಲಯದ ಕಸ್ಟಡಿಯಲ್ಲಿದೆ. ಹೀಗಿರುವಾಗ, ರನ್ಯಾ ದೇಶ ತೊರೆಯುವ ಸಂದರ್ಭ ನಿರ್ಮಾಣವಾಗುವುದಿಲ್ಲ’ ಎಂದರು.

‘ಆರೋಪಿಗೆ ತಿಳಿಯುವ ಭಾಷೆಯಲ್ಲಿ ದಾಖಲೆಗಳನ್ನು ಒದಗಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ರನ್ಯಾಗೆ ಕನ್ನಡದಲ್ಲಿ ಮುದ್ರಿಸಿರುವ ಎರಡು ಪುಟಗಳ ದಾಖಲೆಯನ್ನು ನೀಡಲಾಗಿದೆ. ಅದನ್ನು ಅವರಿಗೆ ಓದಲು ಬಂದಿಲ್ಲ. ಇನ್ನು ಅಪೂರ್ಣವಾದ ದಾಖಲೆಯ ನಕಲನ್ನು ಒದಗಿಸಲಾಗಿದೆ. ರನ್ಯಾಗೆ ಸಂವಿಧಾನದ ಪರಿಚ್ಛೇದ ೨೨(೫)ರ ಅಡಿ ಸಕ್ಷಮ ಪ್ರಾಧಿಕಾರಕ್ಕೆ ಸಮರ್ಥವಾದ ರೀತಿಯಲ್ಲಿ ಮನವಿ ಸಲ್ಲಿಸಲು ಅಸಾಧ್ಯವಾಗಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ತರುಣ್ ರಾಜು ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಹಷ್ಮತ್ ಪಾಷಾ, ‘ಕಾಫಿಪೋಸಾ ಅಡಿ ಬಂಧನವೇ ಅಕ್ರಮ ಎಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರದ ಹಣಕಾಸು, ಕಂದಾಯ ಇಲಾಖೆ, ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿಗೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಅದನ್ನು ಹೈಕೋರ್ಟ್ನ ಸಲಹಾ ಸಮಿತಿಗೆ ರವಾನಿಸಿ ಕೈಬಿಟ್ಟಿದೆ. ಇಲ್ಲಿ ಜಂಟಿ ಕಾರ್ಯದರ್ಶಿಯು ಪೋಸ್ಟ್ ಮ್ಯಾನ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ತರುಣ್ ರಾಜು ಅವರು ದುಬೈನಲ್ಲಿ ರನ್ಯಾ ಜೊತೆ ವ್ಯವಹರಿಸಿದ್ದು, ಅಲ್ಲಿ ಮಾಡಿರುವ ಕೆಲಸಕ್ಕೆ ಅವರನ್ನು ಭಾರತದಲ್ಲಿ ಹೊಣೆ ಮಾಡಲಾಗದು’ ಎಂದು ಆಕ್ಷೇಪಿಸಿದರು.


Share It

You May Have Missed

You cannot copy content of this page