ತಿಪಟೂರು: ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದ ಚಿರತೆಯನ್ನು ಕೈಯ್ಯಿಂದಲೇ ಹಿಡಿದು ಸುದ್ದಿ ಮಾಡಿದ್ದ ವ್ಯಕ್ತಿಯೊಬ್ಬರ ಪುತ್ರಿ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಿಪಟೂರು ತಾಲೂಕಿನ ರಂಗಾಪುರದ ಚಿಕ್ಕಕೊಟ್ಟಿಗೇನಹಳ್ಳಿ ಒಂದು ವಾರದ ಹಿಂದೆ ಚಿರತೆ ಹಿಡಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಚಿರತೆ ತಪ್ಪಿಸಿಕೊಂಡು ಓಡಿ ಹೋಗಿತ್ತು. ಈ ವೇಳೆ ವ್ಯಕ್ತಿಯೊಬ್ಬರು ಅದರ ಬಾಲವನ್ನು ಹಿಡಿದು, ಚಿರತೆಯನ್ನು ಸೆರೆಹಿಡಿಯಲು ಸಹಕರಿಸಿ ಸಾಹಸ ಮೆರೆದಿದ್ದರು.
ಆನಂದ್ ಎಂಬ ಈ ವ್ಯಕ್ತಿಯ ಸಾಹಸ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆನಂದ್ ಅವರ ೧೩ ವರ್ಷದ ಪುತ್ರಿ ನೆನ್ನೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದು, ಆಕೆ ಇಂದು ಬೆಳಗಿನ ಜಾವ ತಿಪಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ವಾರದ ಹಿಂದಷ್ಟೇ ಸಾಹಸ ಮೆರೆದು ಹೀರೋ ಆಗಿದ್ದ ವ್ಯಕ್ತಿಯ ಪುತ್ರಿಯ ಸಾವಿಗೆ ಗ್ರಾಮಸ್ಥರು ಸೇರಿದಂತೆ ತಾಲೂಕಿನ ಜನತೆ ಮರುಕ ವ್ಯಕ್ತಪಡಿಸಿದ್ದಾರೆ.