ಗುಂಡ್ಲುಪೇಟೆ: ವಿಶ್ವರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಜನ್ಮದಿನದ ಅಂಗವಾಗಿ ಮೈಸೂರಿನ ಟೌನ್ ಹಾಲ್ ಆವರಣದಲ್ಲಿ ಜಿಲ್ಲಾ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಿವಪುರ ಮಹದೇವಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಡು ಕಂಡ ಅಪ್ರತಿಮ ಹೋರಾಟಗಾರ ವಿಶ್ವ ಜ್ಞಾನಿ, ಸಮಾಜವಾದಿ ಚಿಂತಕ ಪ್ರೊ ಎಂ.ಡಿ ನಂಜುಂಡಸ್ವಾಮಿಯವರ ಜನ್ಮದಿನ ಪೆಬ್ರವರಿ 13ರ ದಿನವನ್ನು ಕರ್ನಾಟಕ ರಾಜ್ಯ ರೈತಸಂಘ ಪ್ರತಿವರ್ಷ ವಿಶೇಷವಾಗಿ ಆಚರಣೆ ಮಾಡಿಕೊಂಡು ಬರುತ್ತಿದೆ. ಅದರಂತೆ ಈ ವರ್ಷ ಮೈಸೂರಿನಲ್ಲಿ ಜಿಲ್ಲಾ ರೈತ ಸಮಾವೇಶವನ್ನು ಹಮ್ಮಿಕೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ .ರೈತಪರ ,ಗ್ರಾಮೀಣ ಪರ ಯೋಜನೆಗಳನ್ನು ರೂಪಿಸಿ ಕೃಷಿಯನ್ನು ಉಳಿಸಲು ಆಗ್ರಹಿಸಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸಮಾವೇಶದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ, ಹೊಸತನದೊಂದಿಗೆ ಹಳ್ಳಿ ಹಳ್ಖಿಗೆ ರೈತ ಸಂಘ,ಕಿರು ಹೊತ್ತಿಗೆ, ರೈತಪರ ಬಜೆಟ್ ಹಕ್ಕು ಮಂಡನೆ,ಸಂಘದ ಸಂವಿಧಾನ ಮುದ್ರಿತ ಪ್ರತಿ ಬಿಡುಗಡೆ ,ಸಂಘದ ಹೊಸ ಮಾದರಿಯ ಬೋರ್ಡ್ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಬಂಡೀಪುರ ಅರಣ್ಯ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ಮಾಡುತಿದ್ದ ವ್ಯಕ್ತಿಯೊರ್ವರು ಅಪಘಾತದಲ್ಲಿ ಮೃತಪಟ್ಟಿದ್ದು ಇವರಿಗೆ ಪಟ್ಟಣದ ಖಾಸಗಿ ಬ್ಯಾಂಕ್ ವಿಮಾ ಹಣವನ್ನು ನೀಡುವಲ್ಲಿ ವಿಳಂಬ ಮಾಡಿರುವುದು ಖಂಡಿಸಿ ರೈತ ಸಂಘಟನೆಯಿಂದ ಇದೇ 15ರಂದು ಬ್ಯಾಂಕಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್ ಹಾವಳಿ ವಿರುದ್ಧ ರೈತ ಸಂಘಟನೆ ಧ್ವನಿ ಎತ್ತಿದ ನಂತರ ರಾಜ್ಯ ಸರ್ಕಾರ ರೈತರು ಮತ್ತು ಬಡವರ ಹಿತದೃಷ್ಟಿಯಿಂದ ಮೈಕ್ರೋಪೈನಾನ್ಸ್ ಹಾವಳಿ ನಿಯಂತ್ರಿಸಲು ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಹೊರಡಿಸಿತು,ಆದರೆ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ವಾಪಸ್ ಕಳಿಸಿರುವುದು ಖಂಡನೀಯ, ಕೂಡಲೇ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ಮರು ಪರಿಶೀಲನೆ ಮಾಡಿ ಇದಕ್ಕೆ ಅಂಕಿತ ಹಾಕಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹಂಗಳ ಮಾಧು, ಯುವಘಟಕದ ಪ್ರಧಾನ ಕಾರ್ಯದರ್ಶಿ ರಘು, ಸಹ ಸಂಘಟನಾ ಕಾರ್ಯದರ್ಶಿ ರೂಪೇಶ್,ಸೃಜನ್ ಸೇರಿದಂತೆ ಇತರರು ಹಾಜರಿದ್ದರು
