ಅಪರಾಧ ಸಿನಿಮಾ ಸುದ್ದಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣ: ಮಧ್ಯಂತರ ವರದಿ ಆಯುಕ್ತರಿಗೆ ಸಲ್ಲಿಕೆ

Share It

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟ ದರ್ಶನ್‌ ಮತ್ತು ರೌಡಿ ವಿಲ್ಸನ್‌ಗಾರ್ಡನ್‌ ನಾಗ ಹಾಗೂ ಇನ್ನಿತರರಿಗೆ ರಾಜಾತಿಥ್ಯ ನೀಡಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ಕೈಗೊಂಡಿರುವ ಆಗ್ನೇಯ ವಿಭಾಗದ ಡಿಸಿಪಿಯವರು ಮಧ್ಯಂತರ ವರದಿಯನ್ನು ನಗರ ಪೊಲೀಸ್‌‍ ಆಯುಕ್ತರಿಗೆ ನೀಡಿದ್ದಾರೆ.

ಹಣದ ಆಮಿಷಕ್ಕೆ ಒಳಗಾಗಿ ಕಾರಾಗೃಹದ ಕೆಲವು ಅಧಿಕಾರಿ ಹಾಗೂ ಸಿಬ್ಬಂದಿ ಇವರುಗಳಿಗೆ ರಾಜಾತಿಥ್ಯ ನೀಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಸಂದರ್ಭದಲ್ಲಿ ನಟ ದರ್ಶನ್‌ ಕಾರಾಗೃಹದ ಬ್ಯಾರೆಕ್‌ ಮುಂದಿನ ಆವರಣದಲ್ಲಿ ಚೇರಿನಲ್ಲಿ ಕುಳಿತು ವಿಲ್ಸನ್‌ ಗಾರ್ಡನ್‌ ನಾಗ ಹಾಗೂ ಇತರರೊಂದಿಗೆ ಕಾಫಿ ಕುಡಿಯುತ್ತಾ ಹರಟೆ ಹೊಡೆಯುತ್ತಿದ್ದ ಫೋಟೋಗಳು ವೈರಲ್ಲಾಗುತ್ತಿದ್ದಂತೆ ರಾಜ್ಯಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿತ್ತು.

ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್‌‍ ಠಾಣೆಯಲ್ಲಿ 3 ಎಫ್‌ಐಆರ್‌ ಸಹ ದಾಖಲಾದವು. ಈ ಪೈಕಿ ಒಂದು ಪ್ರಕರಣವನ್ನು ಎಸಿಪಿ ಹಾಗೂ ಇನ್ನೆರಡು ಪ್ರಕರಣಗಳ ತನಿಖೆಯನ್ನು ಇನ್‌ಸ್ಪೆಕ್ಟರ್‌ಗಳು ನಡೆಸಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆಗಳನ್ನು ಪಡೆದುಕೊಂಡಿದ್ದು, ತನಿಖೆ ಕೈಗೊಂಡು ವರದಿಯನ್ನು ಕ್ರೋಢೀಕರಿಸಿ ಆಗ್ನೇಯ ವಿಭಾಗದ ಡಿಸಿಪಿ ಸಾ.ರಾ.ಫಾತಿಮ ಅವರಿಗೆ ಕೊಟ್ಟಿದ್ದರು.

ಇದೀಗ ಡಿಸಿಪಿಯವರು ಆ ವರದಿಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೀಡಿದ್ದಾರೆಂದು ತಿಳಿದುಬಂದಿದೆ. ನಂತರ ತನಿಖೆಯನ್ನು ಮುಂದುವರೆಸಿರುವ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸದ್ಯದಲ್ಲೇ ಚಾರ್ಜ್‌ಶೀಟ್‌ ಸಲ್ಲಿಸಲಿದ್ದಾರೆ.


Share It

You cannot copy content of this page