ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಗೃಹ ಖಾತೆ ಸಚಿವ ಡಾ. ಜಿ.ಪರಮೇಶ್ವರ್ ಭೇಟಿಯಾಗಿ ಪರಸ್ಪರ ಚರ್ಚಿಸಿದ್ದು, ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ ಮೂಡಿಸಿದೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು, ದಲಿತ ಸಿಎಂ ಕೂಗು ಜೋರಾಗುತ್ತಿದೆ. ದಲಿತ ಸಚಿವರೆಲ್ಲ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದು, ಹೈಕಮಾಂಡ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಆಗುವುದೇ ಆದರೆ, ಈ ಹಿಂದೆ ಅನ್ಯಾಯವಾಗಿರುವ ದಲಿತ ಸಮುದಾಯಕ್ಕೆ, ಅದರಲ್ಲೂ ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ಸಿಗಲಿ ಎಂಬ ತೀರ್ಮಾನಕ್ಕೆ ಎಲ್ಲ ನಾಯಕರು ಬಂದಿದ್ದಾರೆ.
ಆರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯದ ಸಿಎಂ ಸ್ಥಾನಕ್ಕೆ ಬರಲಿದ್ದಾರೆ ಎಂಬಂತಹ ಚರ್ಚೆ ನಡೆದಿತ್ತು. ಆದರೆ, ಖರ್ಗೆ ರಾಜ್ಯ ರಾಜಕಾರಣಕ್ಕೆ ವಾಪಸ್ಸಾಗುವ ಕುರಿತು ಆಸಕ್ತಿ ವಹಿಸಿರಲಿಲ್ಲ. ಆದರೂ, ತಮ್ಮ ಸಮುದಾಯದ ಒಬ್ಬರಿಗೆ ಸಿಎಂ ಸ್ಥಾನ ಸಿಗುವುದಾದರೆ ಸಿಗಲಿ ಎಂಬುದು ಖರ್ಗೆ ಅವರ ಆಶಯ ಎನ್ನಲಾಗಿದೆ.
ಖರ್ಗೆ ಅವರ ಭೇಟಿಯಾದ ನಂತರ ಪರಮೇಶ್ವರ್ ಮಾತನಾಡಿ, ನಾನು ಮತ್ತು ಖರ್ಗೆ ಅವರು ಯಾವುದೇ ರಾಜಕಾರಣದ ವಿಷಯ ಮಾತನಾಡಿಲ್ಲ. ನಮ್ಮಿಬ್ಬರದ್ದು ಒಂದೇ ಕುಟುಂಬ. ಖರ್ಗೆ ನನ್ನ ಹಿರಿಯಣ್ಣ ಇದ್ದಂತೆ. ರಾಜಕೀಯ ಮಾತನಾಡಿದ್ದರೆ ಮಾಧ್ಯಮದ ಮುಂದೆ ಹೇಳುತ್ತಿದ್ದೆ. ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ.
ದೆಹಲಿಗೆ ಅಗತ್ಯ ಬಿದ್ದಾಗ ಹೋಗುತ್ತೇನೆ. ದೆಹಲಿಗೆ ಹೋಗಿ ರಾಜಕಾರಣ ಮಾಡುವಂತಹ ಪರಿಸ್ಥಿತಿ ಈಗೇನೂ ಇಲ್ಲ. ಸಧ್ಯಕ್ಕೆ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲಗಳಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದು, ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.