ಅಹಮದಾಬಾದ್: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಭೇಟಿ ಬಚಾವೋ, ಬೇಟಿ ಪಡಾವೋ” ಭಾಷಣ ಮಾಡಿ ಇಡೀ ಶಾಲೆಯ ಗಮನ ಸೆಳೆದಿದ್ದ ಯುವತಿಯನ್ನು ಆಕೆಯ ಶಿಕ್ಷಕನೇ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.
ಹತ್ತನೇ ತರಗತಿ ಓದುತ್ತಿರುವ ಬಾಲಕಿಯೊಬ್ಬಳು ಅತ್ಯಾಚಾರಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, 10 ನೇ ತರಗತಿ ಬೋರ್ಡ್ ಎಕ್ಸಾಂ ಬರೆಯಲು ಸಿದ್ಧತೆ ನಡೆಸುತ್ತಿದ್ದಾಳೆ. ಫೆ.7 ರಂದು ತನ್ನ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರವನ್ನು ಮೆಟ್ಟಿನಿಂತು ಫೆ.27 ರಿಂದ ಪರೀಕ್ಷೆ ಬರೆಯುತ್ತಿದ್ದಾಳೆ.
ಬಾಲಕಿ ತಾನು ಪೊಲೀಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದೇನೆ. ನನಗೆ ವಿಜ್ಞಾನ ಮತ್ತು ಗಣಿತ ಮೆಚ್ಚಿನ ವಿಷಯಗಳು. ಬೋರ್ಡ್ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ನನ್ನ ಮುಂದಿನ ವಿದ್ಯಾಭ್ಯಾಸವನ್ನು ಆಯ್ಕೆ ಮಾಡುತ್ತೇನೆ ಎಂದು ತಿಳಿಸಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬಾಲಕಿಯ ಪೋಷಕರು ಕೃಷಿ ಕಾರ್ಮಿಕರಾಗಿದ್ದು, ಹೆಣ್ಣು ಮಕ್ಕಳನ್ನು ಉಳಿಸುವ ಮತ್ತು ಶಿಕ್ಷಣ ನೀಡುವ ಕುರಿತು ಗಣರಾಜೋತ್ಸವ ಕಾರ್ಯಕ್ರಮದಲ್ಲಿ ರೋಮಾಂಚಕ ಭಾಷಣ ಮಾಡಿದ್ದಳು. ಭಾಷಣ ಮಾಡಿದ 11 ದಿನಗಳ ನಂತರ ಆಕೆಯ ಜೀವನದಲ್ಲಿ ಅಲ್ಲೋಲಕಲ್ಲೋಲವೇ ನಡೆದುಹೋಗಿತ್ತು.
33 ವರ್ಷದ ಆಕೆಯ ಶಾಲಾ ಶಿಕ್ಷಕ ತನ್ನ ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ಹೊಟೇಲ್‌ಗೆ ಆಮಿಷವೊಡ್ಡಿ ಕರೆದೊಯ್ದು ಅತ್ಯಾಚಾರ ನಡೆಸಿ, ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಜತೆಗೆ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಮಾಡುವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಬಾಲಕಿ ಪ್ರಸ್ತುತ ತನ್ನ ತಂದೆಯ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದು, ಅವಳ ಜತೆಗೆ ಇಬ್ಬರು ಪರೀಕ್ಷೆ ಎದುರಿಸುವ ಹೆಣ್ಣುಮಕ್ಕಳಿದ್ದಾರೆ. ಜನರು ಮತ್ತು ಸಂಬAಧಿಕರು ದಿನವೂ ಬಂದು ಆಕೆಯನ್ನು ನೋಡುವ ನೆಪದಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆ ಕೊಡುತ್ತಾರೆ. ಹೀಗಾಗಿ, ನಾವು ಆಕೆಯನ್ನು ನಮ್ಮ ಮನೆಯಲ್ಲಿರಿಸಿಕೊಂಡು ಶಿಕ್ಷಣದ ಕಡೆಗೆ ಗಮನಹರಿಸುತ್ತಿದ್ದೇವೆ ಎಂದು ಅವರ ಮಾವ ತಿಳಿಸಿದ್ದಾರೆ.
ಈ ನಡುವೆ ಆಕೆಯ ಧೈರ್ಯ ಮತ್ತು ಅಧ್ಯಯನಕ್ಕೆ ತೋರುವ ಅಚಲವಾದ ಸಮರ್ಪಣೆ ನಮಗೆ ಹೆಮ್ಮೆ ಮೂಡಿಸಿದೆ ಎಂದು ಆತನ ಹೇಳಿದ್ದು, ಆಕೆಯ ಭಾಷಣ ಕೇಳಿ ಮೆಚ್ಚಿಕೊಂಡ ಪ್ರೇಕ್ಷಕರಲ್ಲಿ ಒಬ್ಬರಾಗಿದ್ದ, ಶಾಲೆಯ ಪ್ರಾಂಶುಪಾಲರು ಸಹ ಆಕೆಯ ಶ್ರಮವನ್ನು ಕೊಂಡಾಡಿದ್ದಾರೆ. ಎಂದೂ ತರಗತಿ ತಪ್ಪಿಸಿಕೊಳ್ಳದ ಪ್ರತಿಭಾವಂತೆ ಆಕೆಯಾಗಿದ್ದು, ಆಕೆಯ ಧೈರ್ಯಕ್ಕೆ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ.