ಮತ್ತೊಂದು ಮಹತ್ವದ ಅಧಿವೇಶನಕ್ಕೆ ಸಜ್ಜಾದ ಬೆಳಗಾವಿ

Oplus_131072

Oplus_131072

Share It

ಬೆಳಗಾವಿ : ಬೆಳಗಾವಿಯಲ್ಲಿ ಸೋಮವಾರದಿಂದ ವಿಧಾನಮಂಡಲದ ಮತ್ತೊಂದು ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್ 19 ರವರೆಗೆ ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನ ನಡೆಯಲಿದೆ. ಈ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬೆಳಗಾವಿಯಲ್ಲಿ ಮತ್ತೊಂದು ಅಧಿವೇಶನ ನಡೆಸುವ ಮೂಲಕ ಈ ಭಾಗದ ಜನರ ಮನ ಗೆಲ್ಲಲು ಮುಂದಾಗಿದೆ.

ಉಪ ಚುನಾವಣೆ ಭರ್ಜರಿ ಗೆಲುವು ಹಾಗೂ ಜನ ಕಲ್ಯಾಣೋತ್ಸವ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ರಾಜ್ಯ ಸರ್ಕಾರಕ್ಕೆ ಸೋಮವಾರದಿಂದ 10 ದಿನಗಳ ಕಾಲ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ರೂಪದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ.

ವಕ್ಫ್, ಮುಡಾ, ಬಾಣಂತಿಯರ ಸಾವಿನಂತಹ ವಿವಾದಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜಾಗಿದ್ದರೆ, ಕೊರೋನಾ ಹಗರಣ ಕುರಿತ ಕುನ್ಹಾ ವರದಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲಿನ ಬಿಡಿಎ ಹಗರಣ ಆರೋಪ, ಲೈಂಗಿಕ ದೌರ್ಜನ್ಯ ಪ್ರಕರಣ, ಯತ್ನಾಳ ಕಚ್ಚಾಟ ಪ್ರಸ್ತಾಪಿಸಿ ಪ್ರತಿಪಕ್ಷಗಳನ್ನು ಕಟ್ಟಿ ಹಾಕಲು ಸರ್ಕಾರವೂ ಸಿದ್ಧತೆ ನಡೆಸಿದೆ. ಹೀಗಾಗಿ ಆಡಳಿತ ಮತ್ತು ಪ್ರತಿಪಕ್ಷ ನಡುವೆ ಜಟಾಪಟಿ ನಿರೀಕ್ಷಿಸಲಾಗಿದೆ.

ಕುಂದಾ ನಗರಿಯ ಸುವರ್ಣಸೌಧದಲ್ಲಿ 11ನೇ ಚಳಿಗಾಲದ ಅಧಿವೇಶನ ನಡೆಯಲಿದೆ. ರಾಜ್ಯ ಸರ್ಕಾರಕ್ಕೆ ಮುಡಾ ಪ್ರಕರಣದಲ್ಲಿ ಇ.ಡಿ ಹೊರಗೆಡವಿರುವ ತನಿಖಾ ವಿಚಾರಗಳನ್ನು ಮುಂದಿಟ್ಟುಕೊಂಡು ಮುಖಭಂಗ ಉಂಟು ಮಾಡಲು ಬಿಜೆಪಿ–ದಳ ಸಜ್ಜಾಗಿವೆ.

ಪ್ರತಿವರ್ಷದಂತೆ ಈ ವರ್ಷವೂ ಉತ್ತರ ಕರ್ನಾಟಕದ ಅಭಿವೃದ್ದಿ ಕುರಿತು ಎರಡು ದಿನ ಅಧಿವೇಶನ ಮೀಸಲಾಗಿರುವುದು ವಿಶೇಷವಾಗಿದೆ. ಆದರೆ ಇದು ಪ್ರತಿ ಸಲವೂ ನಡೆಯುತ್ತಿದ್ದು ಈ ಬಾರಿ ಈ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆಯೇ ಅಥವಾ ಇಷ್ಟು ವರ್ಷದಂತೆ ಕೇವಲ ಹೆಸರುಗಷ್ಟೇ ನಡೆಯಲಿದೆಯೇ ಕಾದು ನೋಡಬೇಕಾಗಿದೆ.


Share It

You cannot copy content of this page