ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

Share It

ಬೆಳಗಾವಿ: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ (2ನೇ ತಿದ್ದುಪಡಿ) ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರೆಯಿತು.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ವಿಧಾನಸಭೆಯಲ್ಲಿ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ (2ನೇ ತಿದ್ದುಪಡಿ) ಮಂಡಿಸಿ ಮಾತನಾಡಿದ ಅವರು, “ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ, ಚಿಕ್ಕಬಳ್ಳಾಪುರದ ಸಂಸದ ಸುಧಾಕರ್ ಅವರ ಕ್ಷೇತ್ರದ ಕೆಲವು ಭಾಗ ಪಾಲಿಕೆ ವ್ಯಾಪ್ತಿಗೆ ಬರುತ್ತಿವೆ. ಜತೆಗೆ ಜಿಬಿಎ ಸದಸ್ಯರ ಪಟ್ಟಿಯಲ್ಲಿ ಪಾಲಿಕೆ ವ್ಯಾಪ್ತಿ ನಿವಾಸಿಯಾಗಿರುವ ಜನಪ್ರತಿನಿಧಿಗಳ ಹೆಸರು ಬಿಟ್ಟು ಹೋಗಿದ್ದು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಪರಿಷತ್ ಸದಸ್ಯರನ್ನು ಜಿಬಿಎ ಸದಸ್ಯರನ್ನಾಗಿಸಲು ತಿದ್ದುಪಡಿ ತರಲಾಗಿದೆ ಎಂದರು.

ಇನ್ನು ಮುಖ್ಯಮಂತ್ರಿಗಳೇ ಜಿಬಿಎ ಮುಖ್ಯಸ್ಥರಾಗಿರುವ ಹಿನ್ನೆಲೆಯಲ್ಲಿ ಮುಖ್ಯಕಾರ್ಯದರ್ಶಿಗಳು ಹಾಗೂ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಹೆಸರು ಸೇರಿಸಲಾಗಿದೆ. ಇನ್ನು ಹಣಕಾಸು ಇಲಾಖೆ ಕಾರ್ಯದರ್ಶಿಗಳನ್ನು ಈ ಸದಸ್ಯರ ಸಮಿತಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಇತ್ತೀಚೆಗೆ ನಡೆದ ಜಿಬಿಎ ಮೊದಲ ಸಭೆಯಲ್ಲಿ ನಾವು ಈ ವಿಚಾರ ಗಮನಿಸಿದೆವು. ವಿರೋಧ ಪಕ್ಷದ ಸದಸ್ಯರು ತಮ್ಮ ರಾಜಕೀಯ ನಿಲುವಿನಿಂದಾಗಿ ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ನಾವು ಈ ತಿದ್ದುಪಡಿ ತಂದು ಇವರನ್ನು ಜಿಬಿಎ ಸದಸ್ಯರನ್ನಾಗಿ ಸೇರಿಸಲಾಗುತ್ತಿದೆ” ಎಂದು ತಿಳಿಸಿದರು.

ವಿರೋಧ ಪಕ್ಷದ ಸಲಹೆಯಂತೆ ಜಿಬಿಎ ನಾಮನಿರ್ದೇಶಿತ ಸದಸ್ಯತ್ವವನ್ನು ಕೈಬಿಡುತ್ತೇವೆ: ಈ ವೇಳೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಮಾತನಾಡಿ, “ಈಗಾಗಲೇ 369 ಪಾಲಿಕೆ ಸದಸ್ಯರಿರುತ್ತಾರೆ. ಸರ್ಕಾರ 20 ಸಾವಿರ ಜನರಿಗೆ ಒಬ್ಬ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಿದರೆ, ಮತ್ತೆ 369 ಮಂದಿ ಸದಸ್ಯರು ಬರುತ್ತಾರೆ. ಇದು ಯಾವ ರೀತಿ ಸೂಕ್ತ ಎಂಬ ಗೊಂದಲ ಜನರಲ್ಲಿದೆ” ಎಂದು ಕೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಯಾವುದೇ ರೀತಿಯ ಚುನಾವಣೆ ನಡೆಯುವುದಿಲ್ಲ. ಇದು ರಾಜ್ಯಮಟ್ಟದ ಸಂಸ್ಥೆಯಾಗಿದೆ. ಈ ವಿಚಾರವಾಗಿ ಸಧ್ಯಕ್ಕೆ ಸಮಸ್ಯೆ ಬರುವುದಿಲ್ಲ. ಮುಂದೆ ಹೊಸ ಪ್ರದೇಶವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಂಡಾಗ ಆ ಭಾಗದಲ್ಲಿ 6 ತಿಂಗಳ ಒಳಗಾಗಿ ಚುನಾವಣೆ ನಡೆಸಬೇಕಾಗುತ್ತದೆ. ಈ ಪ್ರದೇಶದಲ್ಲಿ ಯಾರಾದರೂ ಪಂಚಾಯ್ತಿ ಸದಸ್ಯನಾಗಿದ್ದರೆ, ಅವರಿಗೆ ಇದರಲ್ಲಿ ಮತದಾನದ ಹಕ್ಕು ಬರುವುದಿಲ್ಲ. ಈ ಬದಲಾವಣೆಯ ಹಂತದಲ್ಲಿ ಆ ಪ್ರದೇಶವನ್ನು ಪ್ರತಿನಿಧಿಸಲು ಒಂದು ಅವಕಾಶ ಕಲ್ಪಿಸಿದ್ದೇವೆ. ಇದು ಅಗತ್ಯವಿಲ್ಲ, ಬೇಡ ಎಂದರೆ ಇದನ್ನು ತೆಗೆದುಹಾಕಲು ಸಿದ್ಧವಿದ್ದೇನೆ. ನಿಮ್ಮ ಸಲಹೆಯಂತೆ ನಾಮನಿರ್ದೇಶಿತ ಸದಸ್ಯರ ಸೇರ್ಪಡೆಯನ್ನು ಕೈಬಿಡುತ್ತೇನೆ” ಎಂದರು.

ಜನಪ್ರತಿನಿಧಿಗಳಿಗೆ ಒಂದೇ ಕಡೆ ಮತದಾನದ ಹಕ್ಕು ಇರಬೇಕು: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, “ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನ ಚುನಾಯಿತ ಪ್ರತಿನಿಧಿಗಳು ಒಂದೊಂದು ನಗರ ಸಭೆ, ಪುರಸಭೆಗಳಿಗೆ ಬದಲಾವಣೆ ಮಾಡಿಕೊಂಡು ಹೋಗುತ್ತಿರುತ್ತಾರೆ ಎಂದರು.

ಬೆಂಗಳೂರು ಪಾಲಿಕೆ ಚುನಾವಣೆ, ಬಳ್ಳಾರಿ ನಗರ ಸಭೆ ಚುನಾವಣೆ, ಬೀದರ್ ನಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಇದು ನಕಲಿ ಮತದಾನದಂತಾಗುತ್ತದೆ. ಹೀಗಾಗಿ, ಅವರು ಯಾವುದಾದರೂ ಒಂದು ಕಡೆ ಐದು ವರ್ಷ ಮತದಾನದ ಅಧಿಕಾರ ಹೊಂದಿರಬೇಕು” ಎಂದು ತಿಳಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಶಿವಕುಮಾರ್ ಅವರು “ನಾನು ವಿರೋಧ ಪಕ್ಷದ ನಾಯಕರ ಸಲಹೆ ಒಪ್ಪುತ್ತೇನೆ. ಯಾರೇ ಆದರೂ ಒಂದೇ ಕಡೆ ಮತ ಹಾಕುವಂತಾಗಬೇಕು. ಆದರೆ ಜಿಬಿಎ ಚುನಾಯಿತ ಸಂಸ್ಥೆಯಲ್ಲ” ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಸಿಎಂ ಆರ್ಥಿಕ ಸಲಹೆಗಾರರಾದ ಶಾಸಕ ಬಸವರಾಜ ರಾಯರೆಡ್ಡಿ, “ಈ ರೀತಿ ಮಾಡಲು ಜನಪ್ರತಿನಿಧಿಗಳ ಕಾಯ್ದೆ ಅವಕಾಶ ನೀಡುವುದಿಲ್ಲ. ವಿಳಾಸ ಬದಲಾವಣೆ ಮಾಡಿದರೆ, ನಾನು ಆ ಭಾಗದ ಮತದಾರನಾಗುತ್ತೇನೆ. ಹೀಗಾಗಿ ಜನಪ್ರತಿನಿಧಿಗಳ ಕಾಯ್ದೆ ಪರಿಶೀಲಿಸಿ ತೀರ್ಮಾನಕ್ಕೆ ಬನ್ನಿ” ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಹಾಗೆಂದು ಮತದಾನವನ್ನು ಟೂರಿಂಗ್ ಟಾಕೀಸ್ ಮಾಡಿಕೊಳ್ಳಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.


Share It

You May Have Missed

You cannot copy content of this page