ಬೆಳಗಾವಿ: ಕಗ್ಗಂಟಾಗಿರುವ ಒಳ ಮೀಸಲು ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದ್ದು, ಗುರುವಾರದ ಸಚಿವ ಸಂಪುಟದಲ್ಲಿ ಕೋರ್ಟ್ ಆದೇಶಕ್ಕೆ ಅನ್ವಯವಾಗುವಂತೆ ಷರತ್ತುಬದ್ಧವಾಗಿ ಶೇ.17ರಷ್ಟು ಮೀಸಲಿನಲ್ಲಿಯೇ ಒಳ ಮೀಸಲು ನೀಡಲು ತೀರ್ಮಾನಿಸಿದೆ.
ಈ ಸಂಬಂಧ ‘ಕರ್ನಾಟಕ ಪರಿಶಿಷ್ಟ ಜಾತಿ ಮೀಸಲಾತಿ (ವರ್ಗೀಕರಣ) ವಿಧೇಯಕ, 2025’ವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ. ಷರತ್ತು ಬದ್ಧವಾಗಿ ಶೇ.17ರ ಒಳ ಮೀಸಲು ಮಸೂದೆ ಮಂಡಿಸುವ ಮೂಲಕ ಒಳ ಮೀಸಲಾತಿ ಗೊಂದಲಕ್ಕೆ ಸದ್ಯಕ್ಕೆ ತೆರೆ ಎಳೆಯಲು ಮುಂದಾಗಿದೆ.
ಪರಿಶಿಷ್ಟ ಜಾತಿಗೆ ಲಭ್ಯ ಇರುವ ಶೇ. 17 ರಷ್ಟು ಮೀಸಲಾತಿ ಪೈಕಿ 18 ಜಾತಿಗಳಿರುವ ಎಡಗೈ ಸಮುದಾಯಕ್ಕೆ ಶೇ. 6 ರಷ್ಟು ಮೀಸಲಾತಿ ಹಾಗೂ 20 ಜಾತಿಗಳಿರುವ ಬಲಗೈ ಸಮುದಾಯಕ್ಕೆ ಶೇ. 6 ರಷ್ಟು ಮೀಸಲಾತಿ ಮತ್ತು 63 ಜಾತಿಗಳಿರುವ ಇತರ ಸಮುದಾಯಕ್ಕೆ ಶೇ.5 ರಷ್ಟು ಒಳ ಮೀಸಲಾತಿ ವರ್ಗೀಕರಣ ಮಾಡುವ ಮಸೂದೆಯನ್ನು ಮಂಡಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ನೇಮಕಾತಿ ಮತ್ತು ಮುಂಬಡ್ತಿಗೆ ಅವಕಾಶ ಕಲ್ಪಿಸಲಿದೆ.
ಆಗಸ್ಟ್ 19 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಡಗೈಗೆ ಶೇ. 6, ಬಲಗೈಗೆ ಶೇ. 6, ಲಂಬಾಣಿ ಭೋವಿ ಕೊರಚ ಕೊರಮ, ಅಲೆಮಾರಿ ಸೇರಿದಂತೆ ಇತರ ಪಂಗಡಗಳಿಗೆ ಶೇ. 5 ರಷ್ಟು ಮೀಸಲಾತಿ ಕಲ್ಪಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು. ಅದರ ಪ್ರಕಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಆಕ್ಷೇಪಿಸಿ ಬಂಜಾರ, ಭೋವಿ, ಕೊರಮ, ಕೊರಚ ಸಮಾಜ ಕಲ್ಯಾಣ ಸಂಘ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರ ವೈಜ್ಞಾನಿಕ ಆಧಾರವಿಲ್ಲದೇ ಮೂರು ಗುಂಪುಗಳನ್ನಾಗಿ ವಿಂಗಡನೆ ಮಾಡಿದೆ. ಇದಕ್ಕಾಗಿ ಯಾವುದೇ ರೀತಿಯಲ್ಲಿಯೂ ಹಿಂದುಳಿದಿರುವಿಕೆ, ಶೈಕ್ಷಣಿಕ ಮತ್ತು ಔದ್ಯೋಗಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಈ ಕ್ರಮಕ್ಕೆ ಮುಂದಾಗಿದ್ದು, ಇದು ಸುಪ್ರೀಂಕೋರ್ಟ್ ಆದೇಶಗಳಿಗೆ ತದ್ವಿರುದ್ಧವಾಗಿದೆ.
ಹೀಗಿದ್ದರೂ, ರಾಜ್ಯ ಸರ್ಕಾರವು, ಹೊಸದಾಗಿ ನಿಗದಿ ಪಡಿಸಿರುವ ಮೀಸಲಾತಿಯ ಅನ್ವಯ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ತುಂಬುವುದಕ್ಕೆ ಮುಂದಾಗಿದೆ. ಇದು ಸಂವಿಧಾನದ ಪರಿಚ್ಛೇದ 14, 15(4) ಮತ್ತು 16(4)ರ ಉಲ್ಲಂಘನೆಯಾಗಲಿದ್ದು, ಸರ್ಕಾರದ ನಿರ್ಣಯವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
