ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ಸೌಕರ್ಯ ಹೆಚ್ಚಿಸಲು BMTC ಮಹತ್ವದ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 31ರ ರಾತ್ರಿಯಿಂದ ಜನವರಿ 1ರ ಬೆಳಗಿನ ಜಾವದವರೆಗೆ ಬಸ್ ಸೇವೆಯನ್ನು ವಿಸ್ತರಿಸಲಾಗಿದ್ದು, ತಡರಾತ್ರಿ 2 ಗಂಟೆಯವರೆಗೆ ವಿಶೇಷ ಬಸ್ಗಳು ಸಂಚರಿಸಲಿವೆ.
ಈಗಾಗಲೇ ನಮ್ಮ ಮೆಟ್ರೋ ಸೇವೆಯನ್ನು ಬೆಳಗಿನ ಜಾವ 3.15ರವರೆಗೆ ವಿಸ್ತರಿಸಿರುವ ಹಿನ್ನೆಲೆ, BMTC ಸಹ ಅದಕ್ಕೆ ಪೂರಕವಾಗಿ ಕ್ರಮ ಕೈಗೊಂಡಿದೆ. ನಗರದಲ್ಲಿ ಹೆಚ್ಚು ಜನ ಸಂಚರಿಸುವ MG ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ರಾತ್ರಿ ವೇಳೆಯಲ್ಲೂ BMTC ಸೇವೆ: ಡಿಸೆಂಬರ್ 31ರಂದು ರಾತ್ರಿ 11 ಗಂಟೆಯ ಬಳಿಕ ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ನಡೆಸಲಿದ್ದು, ಜನವರಿ 1ರ ಬೆಳಗಿನ ಜಾವ 2ರವರೆಗೆ ಸಂಚಾರ ಇರಲಿದೆ. ಸಾರ್ವಜನಿಕರು ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡಿ ಸುರಕ್ಷಿತವಾಗಿ ಮನೆ ತಲುಪಲು ಈ ವ್ಯವಸ್ಥೆ ಮಾಡಲಾಗಿದೆ.
ಯಾವ ಮಾರ್ಗಗಳಲ್ಲಿ ವಿಶೇಷ ಬಸ್?
MG ರೋಡ್ನಿಂದ ಬನ್ನೇರುಘಟ್ಟ, ಬನಶಂಕರಿ, ನೈಸ್ ರಸ್ತೆ ಜಂಕ್ಷನ್, ಸುಂಕದಕಟ್ಟೆ, ಮಾರತಹಳ್ಳಿ, ಚಿಕ್ಕಜಾಲ, ಮಾದಾವರ, ಬಾಗಲೂರು, ಹೊಸಕೋಟೆ ಕಡೆಗೆ ವಿಶೇಷ ಬಸ್ಗಳು ಓಡಾಡಲಿವೆ.
ಅದೇ ರೀತಿ ಕೋರಮಂಗಲ ಮತ್ತು ಮಡಿವಾಳದಿಂದ ಎಲೆಕ್ಟ್ರಾನಿಕ್ ಸಿಟಿ, ಕೆಆರ್ ಪುರಂ, ಸರ್ಜಾಪುರ, ದೇವನಹಳ್ಳಿ, ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಹೆಬ್ಬಾಳ ಹಾಗೂ ವೈಟ್ಫೀಲ್ಡ್ಗೆ ಬಸ್ ಸೌಲಭ್ಯ ಇರಲಿದೆ.
70ಕ್ಕೂ ಹೆಚ್ಚು ಹೆಚ್ಚುವರಿ ಬಸ್ಗಳು: BMTC ಮಾಹಿತಿ ಪ್ರಕಾರ, ಡಿಸೆಂಬರ್ 31ರ ರಾತ್ರಿಯಿಂದ ಜನವರಿ 1ರ ಬೆಳಗಿನ ಜಾವದವರೆಗೆ ಸುಮಾರು 70 ವಿಶೇಷ ಬಸ್ಗಳನ್ನು ನಿಯೋಜಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಶಿವಾಜಿನಗರ, ಕೆಆರ್ ಮಾರ್ಕೆಟ್, ಕೋರಮಂಗಲ, ಯಶವಂತಪುರ, ಯಲಹಂಕ, ಕಾಡುಗೋಡಿ ಸೇರಿದಂತೆ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಸೇವೆ ಒದಗಿಸಲಾಗುತ್ತದೆ.
ಇದೇ ವೇಳೆ ಎಲೆಕ್ಟ್ರಾನಿಕ್ಸ್ ಸಿಟಿ, ಜಿಗಣಿ, ಸರ್ಜಾಪುರ, ಕೆಂಗೇರಿ, ಹೊಸಕೋಟೆ, ಬನಶಂಕರಿ, ಜೀವನ್ ಭೀಮಾನಗರ ಸೇರಿದಂತೆ ಹಲವು ಭಾಗಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಇರಲಿದೆ ಎಂದು BMTC ಸ್ಪಷ್ಟಪಡಿಸಿದೆ.

