ಸಿನಿಮಾ ಸುದ್ದಿ

23 ವರ್ಷಗಳ ಬಳಿಕ ರಿ-ರಿಲೀಸ್ ಆದ ‘ಅಪ್ಪು’ ಬಾಕ್ಸ್ ಆಫೀಸ್ ರೆಕಾರ್ಡ್ ಕಲೆಕ್ಷನ್!

Share It

ಪವರ್ ಸ್ಟಾರ್ ದಿವಂಗತ ನಟ, ಅಣ್ಣಾವ್ರ ನೆಚ್ಚಿನ ಕಿರಿಯ ಮಗ ಪುನೀತ್ ರಾಜ್​ಕುಮಾರ್ ಅವರ ಜನ್ಮದಿನಕ್ಕೆ (ಮಾರ್ಚ್ 17) 3 ದಿನ ಮೊದಲು ಅಂದರೆ ಮಾರ್ಚ್ 14ರಂದು ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಯಿತು. ಈ ಚಿತ್ರವನ್ನು ರಾಜ್ಯಾದ್ಯಂತ ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ.

ಈ ಸಿನಿಮಾ ರೀ-ರಿಲೀಸ್ ಆಗಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮತ್ತೆ ಮತ್ತೆ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಸದ್ಯ ಯಾವುದೇ ಹೊಸ ಸಿನಿಮಾಗಳ ಅಬ್ಬರ ಇಲ್ಲ. ಇದು ಚಿತ್ರಕ್ಕೆ ಮತ್ತಷ್ಟು ಸಹಕಾರಿ ಆಗಿದೆ.

ಪುನೀತ್ ರಾಜ್ ಕುಮಾರ್ ಅವರ ಮೊಟ್ಟಮೊದಲ ಚಿತ್ರ ‘ಅಪ್ಪು’ 2002ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಆಗಿನ ಕಾಲಕ್ಕೆ ಸೂಪರ್ ಹಿಟ್ ಆಯಿತು. ಅಪ್ಪು ಚಿತ್ರ ಪರಭಾಷೆಗಳಿಗೂ ರಿಮೇಕ್ ಆಯಿತು. ಈ ಚಿತ್ರ 23 ವರ್ಷಗಳ ಬಳಿಕ ರೀ-ರಿಲೀಸ್ ಕಂಡಿದೆ. ರಾಜ್ಯದ ಉದ್ದಗಲಕ್ಕೂ ಅಪ್ಪು ಚಿತ್ರ ಅಬ್ಬರಿಸುತ್ತಿದೆ. ಹೋಳಿ ಹಬ್ಬದ ರಜಾ ದಿನ, ಪುನೀತ್ ರಾಜ್ ಕುಮಾರ್ ಜನ್ಮದಿನ, ವೀಕೆಂಡ್​ಗಳು ಚಿತ್ರದ ಗಳಿಕೆ ಹೆಚ್ಚಲು ಮತ್ತಷ್ಟು ಸಹಕಾರಿಯಾಗಿದೆ.

ಮೊದಲ ದಿನ ಫ್ಯಾನ್​ ಶೋಗಳನ್ನು ಮುಂಜಾನೆಯೇ ಆಯೋಜನೆ ಮಾಡಲಾಗಿತ್ತು. ಇದರಿಂದ ಅಪ್ಪು ಚಿತ್ರಕ್ಕೆ ಸಾಕಷ್ಟು ಹಣ ಹರಿದು ಬಂದಿದೆ. ‘ಅಪ್ಪು’ ಚಿತ್ರ ಭಾನುವಾರ ಒಂದೇ ದಿನ ಬರೋಬ್ಬರಿ 30 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ. ಈ ಚಿತ್ರ 3 ದಿನಗಳಿಗೆ 1 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದೆ. 23 ವರ್ಷಗಳ ಹಿಂದಿನ ಚಿತ್ರವೊಂದು ರೀ-ರಿಲೀಸ್ ಕಂಡು ಇಷ್ಟು ದೊಡ್ಡ ಮೊತ್ತದ ಗಳಿಕೆ ಆಗುತ್ತದೆ ಎಂದರೆ ಅದು ನಿಜಕ್ಕೂ ದಾಖಲೆಯೇ ಸರಿ. ಆದರೆ, ನಿರ್ಮಾಪಕರ ಕಡೆಯಿಂದ ಅಧಿಕೃತ ಘೋಷಣೆಯಾಗಿಲ್ಲ.

ಮಾರ್ಚ್ 17ರಂದು ಎಲ್ಲ ಕಡೆಗಳಲ್ಲಿ ಪುನೀತ್ ಕೂಗು ಕೇಳುತ್ತಿದೆ. ಏಕೆಂದರೆ ಇಂದು ಅವರ ಜನ್ಮದಿನ. ಈ ಜೋಶ್​ನಲ್ಲಿ ಪುನೀತ್ ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡುತ್ತಾ ಇದ್ದಾರೆ. ಹೀಗಾಗಿ, ಇಂದು ಕೂಡ ಒಳ್ಳೆಯ ಗಳಿಕೆ ಆಗೋ ಸಾಧ್ಯತೆ ಇದೆ. ಇತ್ತೀಚೆಗೆ ಸಿನಿಮಾಗಳು ಹೀಗೆ ಬಂದು ಹಾಗೆ ಹೋಗುತ್ತಿವೆ. ಯಾವ ಕನ್ನಡ ಚಿತ್ರಗಳೂ ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತಿಲ್ಲ. ಹೀಗಿರುವಾಗ ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ.

‘ಪಿಆರ್​ಕೆ ಪ್ರೊಡಕ್ಷನ್ಸ್’ ಮೂಲಕ ಈ ಚಿತ್ರವನ್ನು ರಿಲೀಸ್ ಮಾಡಲಾಗಿದೆ. ‘ಅಪ್ಪು’ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ರಕ್ಷಿತಾ ನಾಯಕಿ. ಈ ಚಿತ್ರವನ್ನು ಆಗ ಪಾರ್ವತಮ್ಮ ರಾಜ್​ಕುಮಾರ್ ಅವರೇ ನಿರ್ಮಾಣ ಮಾಡಿದ್ದರು. ಜೊತೆಗೆ ಪುನೀತ್ ಅವರ ಸಖತ್ ಡ್ಯಾನ್ಸ್, ಸ್ಟಂಟ್, ಪ್ರಾಸಬದ್ಧ ಯುಗಳ ಗೀತೆಗಳು ‘ಅಪ್ಪು’ ಚಿತ್ರವನ್ನು ಆಗ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಮಾಡಿದ್ದವು.

ಇದೀಗ ಇದೇ ನೆನಪಿಗಾಗಿ ಅಪ್ಪು ಎಂದೇ ಅಣ್ಣಾವ್ರ ಮನೆಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸವಿನೆನಪಿಗಾಗಿ ಮತ್ತೆ ‘ಅಪ್ಪು’ ರಿ-ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ರೆಕಾರ್ಡ್ ಹಿಟ್ ಆಗಿದೆ. ಇದಕ್ಕೆ ಕನ್ನಡ ಚಿತ್ರರಂಗದ ಅಭಿಮಾನಿಗಳ ಹೃದಯ ತುಂಬಿದ ಅಭಿಮಾನವೇ ಕಾರಣ ಎನ್ನಬಹುದು.


Share It

You cannot copy content of this page