ಸುದ್ದಿ

ಜಾತಿ ಪ್ರಮಾಣಪತ್ರ ನೀಡಲು ತಹಸೀಲ್ದಾರ್ ಗೆ ಕಾಡುಗೊಲ್ಲ ಸಮುದಾಯದಿಂದ ಮನವಿ

Share It

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಬುಡಕಟ್ಟು ಜನಾಂಗಕ್ಕೆ ‌ಸೇರಿದ ಪ್ರಾಚೀನ ಕಾಲದ ಕಾಡುಗೊಲ್ಲರು ಇಂದಿಗೂ ತಾಲ್ಲೂಕಿನ ಬಹುತೇಕ ಹಟ್ಟಿಗಳಲ್ಲಿ ವಾಸಿಸುತ್ತಿದ್ದಾರೆ. ಈ ಕಾಡುಗೊಲ್ಲರು ಕುರಿ,ಮೇಕೆ,ದನಗಳನ್ನು ಕಾಯುತ್ತಾ ಒಂದು ಕಡೆ ನೆಲೆಸದೆ ಗುಡ್ಡಗಾಡು ಕಾಡು ಮೇಡುಗಳಲ್ಲಿ ಕುರಿ, ಮೇಕೆ, ದನಗಳನ್ನು ಮೇಯಿಸುತ್ತಾ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ಕಾಡುಗೊಲ್ಲರು ಇಂದಿಗೂ ಮುಖ್ಯವಾಹಿನಿಗೆ ಬರದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಎಂದು ಜಾತಿಯ ಪ್ರಮಾಣಪತ್ರ ನೀಡಬೇಕೆಂದು ಆಗ್ರಹಿಸಿ ಹೊಳಲ್ಕೆರೆ ತಾಲ್ಲೂಕಿನ ಕಾಡುಗೊಲ್ಲ ಹೋರಾಟ ಸಮಿತಿ ಸದಸ್ಯರು ಹಾಗೂ ಸಮಾಜದ ಅನೇಕ ಯುವಕರು, ಮುಖಂಡರು ಹೊಳಲ್ಕೆರೆಯಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮಾಜದ ತಾಲ್ಲೂಕು ಅಧ್ಯಕ್ಷ ಎ.ಚಿತ್ತಪ್ಪ ಮಾತನಾಡಿ, ತಾಲ್ಲೂಕಿನ ಅಡವಿಗೊಲ್ಲ, ಹಟ್ಟಿಗೊಲ್ಲ, ಕಾಡುಗೊಲ್ಲ ಸೇರಿ ಎಲ್ಲಾ ಗೊಲ್ಲ ಸಮುದಾಯದ ಉಪಪಂಗಡಗಳಿವೆ. ಹೊಳಲ್ಕೆರೆ ತಾಲ್ಲೂಕಿನ ಬಹುತೇಕ ಹಟ್ಟಿಗಳಲ್ಲಿ ಕಾಡು ಗೊಲ್ಲರೇ ಯಥೇಚ್ಛವಾಗಿದ್ದು ತಮ್ಮ ಜೀವನಾಧಾರವಾಗಿ ಕುರಿ, ಮೇಕೆ, ದನಗಳನ್ನು ಮೇಯಿಸಲು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗಿ ಅಡವಿ, ಕಾಡುಗಳಲ್ಲೇ ಇಂದಿಗೂ ಜೀವನ ನಡೆಸುತ್ತಿದ್ದಾರೆ.

ಕಾಡುಗೊಲ್ಲರ ಸಂಪ್ರದಾಯಗಳು, ಧಾರ್ಮಿಕ ಆಚರಣೆಗಳು ವಿಭಿನ್ನವಾಗಿದ್ದು, ಇಂದಿಗೂ ಕಾಡುಗೊಲ್ಲ ಸಮುದಾಯದ ಜನರು ಪದವಿ, ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಏಕೆಂದರೆ ಈ ಸಮುದಾಯದ ಜನರಿಗೆ ದೈನಂದಿನ ಜೀವನ ನಿರ್ವಹಿಸುವುದೇ ಕಷ್ಟವಾಗಿದೆ.

ಇಷ್ಟಾದರೂ ಈ ಕಾಡುಗೊಲ್ಲ ಸಮುದಾಯದ ಜನರಿಗೆ ಸಿಗಬೇಕಿದ್ದ ಜಾತಿಯ ಪ್ರಮಾಣಪತ್ರ ಇನ್ನೂ ಸಿಗುತ್ತಿಲ್ಲ. ಆದರೆ ರಾಜ್ಯಸರ್ಕಾರ ಈಗಾಗಲೇ ಕಾಡುಗೊಲ್ಲ ಸಮುದಾಯದ ಜನರಿಗೆ ಜಾತಿಯ ಪ್ರಮಾಣಪತ್ರ ನೀಡಬೇಕೆಂದು ಸುತ್ತೋಲೆ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಹೊಳಲ್ಕೆರೆ ತಾಲ್ಲೂಕಿನ 30 ಜನರು ತಾಲ್ಲೂಕು ಕಚೇರಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಇಲ್ಲಿನ ಹೊಳಲ್ಕೆರೆ ತಹಸೀಲ್ದಾರ್ ಪ್ರಮಾಣಪತ್ರ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕಡೆ ಜಾತಿಯ ಪ್ರಮಾಣ ಪತ್ರ ನೀಡುತ್ತಾರೆ.

ಇಲ್ಲಿಯೂ ಅರ್ಜಿಯನ್ನು ಸಲ್ಲಿಸಿದ ಕಾಡು ಗೊಲ್ಲ ಸಮುದಾಯದ ಜನರಿಗೆ ಪ್ರಮಾಣಪತ್ರ ನೀಡಬೇಕೆಂದು ಒತ್ತಾಯಿಸಿದರು. ನಂತರ ಈ ಬಗ್ಗೆ ಕಾಡುಗೊಲ್ಲ ಸಮುದಾಯದ ಹೊಳಲ್ಕೆರೆ ತಾಲ್ಲೂಕಿನ ಅಧ್ಯಕ್ಷ ಎ.ಚಿತ್ತಪ್ಪ ನೇತೃತ್ವದಲ್ಲಿ ತಹಸೀಲ್ದಾರ್ ಬೀಬಿ ಫಾತೀಮ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ದಾನೇಂದ್ರ, ಗುಂಜಿಗನೂರು ಗ್ರಾ.ಪಂ ಅಧ್ಯಕ್ಷ ವಿಜಯಲಕ್ಷ್ಮಿ ದಾಸಪ್ಪ, ಮಾಜಿ ಅಧ್ಯಕ್ಷ ಎ.ಬಂಗಾರಪ್ಪ, ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಿಮ್ಮಪ್ಪ, ಗೌಡಿಹಳ್ಳಿ ರಾಘವೇಂದ್ರ, ಬಿದರಕೆರೆ ಏಕಾಂತಪ್ಪ, ಶ್ರೀಧರ, ಸುರೇಶ್ ಆವಿನಹಟ್ಟಿ, ಗೋವಿಂದಪ್ಪ, ಅಮೃತಾಪುರ ರಂಗಸ್ವಾಮಿ, ತೇಕಲವಟ್ಟಿ ಸಚಿನ್ ಹಾಗೂ ಸಮಾಜದ ಅನೇಕ ಮುಖಂಡರುಗಳು ಹಾಜರಿದ್ದರು.


Share It

You cannot copy content of this page