ಬೆಂಗಳೂರಿನಲ್ಲಿಯೂ ಬಾಣಂತಿಯೊಬ್ಬರ ಸಾವು: ರಾಜ್ಯದಲ್ಲಿ ಹೆಚ್ಚುತ್ತಿದೆ ಬಾಣಂತಿಯರ ಸಾವಿನ ಪ್ರಕರಣ

Oplus_131072

Oplus_131072

Share It

ಬೆಂಗಳೂರು: ಬಳ್ಳಾರಿ, ರಾಯಚೂರು, ಬೆಳಗಾವಿಯ ಬಳಿಕ ಇದೀಗ ಬೆಂಗಳೂರಿನಲ್ಲಿಯೂ ಬಾಣಂತಿಯೊಬ್ಬರ ಸಾವಾಗಿದೆ.
ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಅನುಷಾ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಒಂದು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅನುಷಾ, ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗರ್ಜೆ ಗ್ರಾಮದ ನಿವಾಸಿ ಅನುಷಾಗೆ ತರೀಕೆರೆಯ ರಾಜ್​ ನರ್ಸಿಂಗ್​​ ಹೋಂನಲ್ಲಿ ಸಹಜ ಹೆರಿಗೆ ಆಗಿತ್ತು. ಡೆಲಿವರಿಗೂ ಮುನ್ನ ಸ್ಕ್ಯಾನಿಂಗ್ ಮಾಡಿದಾಗ ಕಲ್ಲು ಇದೆ ಎಂದು ವೈದ್ಯರು ತಿಳಿಸಿದ್ದರು. ಅದೇ ಸ್ಕ್ಯಾನಿಂಗ್​​​ ವರದಿ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಡೆಲಿವರಿಯಾದ ಒಂದೇ ತಿಂಗಳಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಅನುಷಾಗೆ ಆಪರೇಷನ್ ಮಾಡಲಾಗಿತ್ತು.

ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವೈದ್ಯರು ಅಲ್ಲಿಯೂ ಯಡವಟ್ಟು ಮಾಡಿದ್ದಾರೆಂದು ಕುಟುಂಬದವರು ಆರೋಪ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಕರುಳಿಗೆ ಹಾನಿಯಾಗಿತ್ತು, ಆದರೆ, ಆ ವಿಚಾರವನ್ನು ವೈದ್ಯರು ಮುಚ್ಚಿಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಶಸ್ತ್ರಚಿಕಿತ್ಸೆ ಆದ ನಂತರ ಮನೆಗೆ ತೆರಳಿದಾಗ ಬಾಣಂತಿಯ ಕೈ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಹೀಗಾಗಿ ಆಕೆಯನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರಿಶೀಲಿಸಿದ ವೈದ್ಯರು, ಆರೋಗ್ಯ ಸಹಜವಾಗಿದೆ. ಏನೂ ಸಮಸ್ಯೆ ಇಲ್ಲ ಎಂದಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಹೀಗಾಗಿ ಮತ್ತೆ ಸ್ಥಳೀಯ ಆಸ್ಪತ್ರೆಗೆ ಅನುಷಾರನ್ನು ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು, ಅನುಷಾಗೆ ಜಾಂಡಿಸ್ ಇದೆ ಎಂದಿದ್ದರು.

ಸ್ಥಳೀಯ ವೈದ್ಯರ ಸಲಹೆಯಂತೆ ಅನುಷಾರನ್ನು ಕುಟುಂಬಸ್ಥರು ಬೆಂಗಳೂರಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ದುರಂತ ಸಂಭವಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಬಾಣಂತಿಯರ ಸುರಕ್ಷತೆ ಕುರಿತ ಆತಂಕ ಮತ್ತಷ್ಟು ಹೆಚ್ಚಾಗಿದೆ.


Share It

You cannot copy content of this page