ಅಪರಾಧ ಸಿನಿಮಾ ಸುದ್ದಿ

ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Share It

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ- 2 ಆರೋಪಿಯಾಗಿ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ.

ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ಪವಿತ್ರಾ ಹಾಗೂ ಇತರೆ ಕೆಲವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮತ್ತೊಮ್ಮೆ ಮುಂದೂಡಿದೆ. ಇಂದು (ಅಕ್ಟೋಬರ್ 8) ಪ್ರಕರಣದ ಕೆಲ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮೊದಲಿಗೆ ನಡೆದು ವಕೀಲರು ವಾದಿಸಿದರು. ಬಳಿಕ ಪ್ರಕರಣದ ಎಸ್​ಪಿಪಿ ಪ್ರಸನ್ನಕುಮಾರ್ ಅವರು ವಾದ ಸರಣಿ ಆರಂಭಿಸಿ, ದರ್ಶನ್ ಹಾಗೂ ಪವಿತ್ರಾ ಪರ ವಕೀಲರು ಪ್ರಕರಣದ ತನಿಖೆ ಬಗ್ಗೆ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ಪ್ರಾರಂಭಿಸಿದರು. ಎಸ್​ಪಿಪಿ ಅವರ ವಾದ ಸರಣಿ ಸುದೀರ್ಘವಾಗಿ ನಡೆದಿದ್ದು, ಅಂತಿಮವಾಗಿ ನ್ಯಾಯಾಲಯದ ಸಮಯ ಮೀರಿದ ಕಾರಣ ಪ್ರಕರಣದ ವಿಚಾರಣೆಯನ್ನು ನಾಳೆ ಅಂದರೆ ಅಕ್ಟೋಬರ್ 9 ರ ಮಧ್ಯಾಹ್ನ 12:30ಕ್ಕೆ ಮುಂದೂಡಲಾಯ್ತು.

ಅಕ್ಟೋಬರ್ 3, 4, 5 ರಂದು ನಡೆದ ವಿಚಾರಣೆಯಲ್ಲಿ ದರ್ಶನ್ ಪರ ಹಿರಿಯ ವಕೀಲರಾದ ಸಿ.ವಿ ನಾಗೇಶ್, ಪವಿತ್ರಾಗೌಡ ಪರ ವಕೀಲರು ತನಿಖೆಯಲ್ಲಿ ಹಲವು ಲೋಪದೋಷಗಳಿವೆ ಎಂದಿದ್ದರು. ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಅವರು, ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿಮಾಡಿದ್ದಾರೆ, ಕತೆ ಹೆಣೆದಿದ್ದಾರೆ ಎಂದು ಟೀಕೆ ಮಾಡಿದ್ದರು. ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಅರೇಬಿಯನ್ ನೈಟ್ಸ್ ಕತೆಗೆ ಹೋಲಿಕೆ ಮಾಡಿದ್ದರು.

ಇಂದು ವಾದ ಮಂಡಿಸಿದ ಎಸ್ ಪಿಪಿ ಪ್ರಸನ್ನಕುಮಾರ್, ಆರೋಪಿಗಳ ಪರ ವಕೀಲರು ಎತ್ತಿರುವ ಪ್ರತಿ ಪ್ರಶ್ನೆಗೂ ಸಹ ಉತ್ತರ ಇದೆ ಎಂದು ಹೇಳಿಯೇ ವಾದ ಆರಂಭಿಸಿದರು. ಸಿ.ವಿ ನಾಗೇಶ್ ಅವರು ಪ್ರಶ್ನೆ ಮಾಡಿದ್ದ, ಎತ್ತಿ ತೋರಿಸಿದ್ದ ಲೋಪದೋಷಗಳಿಗೆ ಬಹುತೇಕ ಉತ್ತರಗಳನ್ನು ಸ್ಪಷ್ಟತೆಯನ್ನು ಎಸ್​ಪಿಪಿ ನೀಡಿದರು. ಮಾತ್ರವಲ್ಲದೆ, ದರ್ಶನ್ ಹಾಗೂ ಅವರ ತಂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ರೀತಿ, ಆನಂತರ ನಡೆದ ಘಟನೆಗಳು, ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆ ಎಲ್ಲವನ್ನೂ ಉಲ್ಲೇಖಿಸಿ, ‘ಇದು ದರ್ಶನ್ ರಕ್ತಚರಿತ್ರೆ’ ಎಂದು ಟೀಕೆ ಮಾಡಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾಗೌಡ ಹಾಗೂ ಇತರ ಆರೋಪಿಗಳ ಬಂಧನವಾಗಿ 4 ತಿಂಗಳಾಗಿದೆ. ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ 4 ಮಂದಿಗೆ ಈಗಾಗಲೇ ಜಾಮೀನು /ದೊರೆತಿದೆ. ದರ್ಶನ್​ರ ಜಾಮೀನಿಗಾಗಿ ರಾಜ್ಯದ ಹೆಸರಾಂತ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸುತ್ತಿದ್ದಾರೆ. ನಾಳೆಗೆ ವಿಚಾರಣೆ ಮುಂದೂಡಲಾಗಿದೆಯಾದರೂ ನಾಳೆಯೂ ಸಹ ಜಾಮೀನು ಸಿಗುವುದು ಅನುಮಾನವೇ ಎನ್ನಲಾಗುತ್ತಿದೆ. ನಾಳೆಯೂ ಸಹ ಎಸ್​ಪಿಪಿ ಅವರ ವಾದ ಮುಂದುವರೆಯುವ ಸಾಧ್ಯತೆ ಇದೆ.


Share It

You cannot copy content of this page