16 ವರ್ಷದ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ : ಸೋಷಿಯಲ್ ಮೀಡಿಯಾ ಕ್ರೆಜ್ ಗೆ ಬ್ರೇಕ್ !
ಬೆಂಗಳೂರು: ಇನ್ಸ್ಟಾಗ್ರಾಂ, ಫೇಸ್ ಬುಕ್ ಸೇರಿ ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮ ನಮಗೆಲ್ಲ ಗೊತ್ತೇ, ಈ ಹಿನ್ನೆಲೆಯಲ್ಲಿ ಈ ಜಾಲತಾಣಗಳಿಂದ ಮಕ್ಕಳನ್ನು ದೂರಯಿಡುವ ಪ್ರಯತ್ನವನ್ನು ಆಸ್ಟ್ರೇಲಿಯಾ ಸರಕಾರ ನಡೆಸಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ಇನ್ಮುಂದೆ 16 ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇನ್ಸ್ಟಾಗ್ರಾಂ, ಫೇಸ್ ಬುಕ್, ಟಿಕ್ ಟಾಕ್ ಮತ್ತು ಎಕ್ಸ್ ವೇದಿಕೆಗಳನ್ನು ಬಳಸದಂತೆ ಕಡಿವಾಣ ಹಾಕಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಮಸೂದೆ ಅಂಗೀಕಾರ ಮಾಡಲು ಸರಕಾರ ಸಿದ್ಧತೆ ನಡೆಸುತ್ತಿದೆ.
ಮೇಟಾ, ಯೂಟ್ಯೂಬ್, ಎಕ್ಸ್ ಮತ್ತು ಟಿಕ್ ಟಾಕ್ ಸಂಸ್ಥೆಗಳಿಗೆ ಇದರ ಪರಿಣಾಮ ಬೀರಲಿದ್ದು, ಈ ಸಂಸ್ಥೆಗಳು ಮಕ್ಕಳ ಹಿತದೃಷ್ಟಿಯಿಂದ ಸರಿಯಾದ ದೃಷ್ಟಿಯಲ್ಲಿ ಕಾರ್ಯನಿರ್ವಹಿಸಬೇಕು. ಮಕ್ಕಳ ಮನಸ್ಸಿನ ಮೇಲೆ ಸಾಮಾಜಿಕ ಜಾಲತಾಣ ಬೀರುವ ಪರಿಣಾಮವನ್ನು ಕಡಿಮೆಮಾಡುವುದು ನಮ್ಮ ಹೊಣೆಗಾರಿಕೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ ಬೆನೆಸ್ ತಿಳಿಸಿದ್ದಾರೆ.
ಈಗಾಗಲೇ ಅನೇಕ ದೇಶಗಳು ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಹೇರಿವೆ. ಫ್ರಾನ್ಸ್15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸದಂತೆ ಕಾನೂನು ರೂಪಿಸಿದೆ. ಅಮೆರಿಕ ಕೂಡ 13 ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸಬೇಕಿದ್ದಲ್ಲಿ, ಪೋಷಕರ ಸುಪರ್ದಿಯಲ್ಲಿ ಬಳಸಬಹುದು ಎಂಬ ಕಾನೂನು ತಂದಿದೆ.
ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ನಿರ್ಧಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲಿ ಕೂಡ ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀರುತ್ತಿದ್ದು ಅನೇಕ ಅನಾಹುತಗಳಿಗೆ ಕಾರಣವಾಗಿವೆ. ಈ ನಿಟ್ಟಿನಲ್ಲಿ ಭಾರತದಲ್ಲೂ ಸೋಷಿಯಲ್ ಮೀಡಿಯಾ ಬ್ಯಾನ್ ಆಗಬೇಕು ಎಂಬ ಒತ್ತಾಯ ಆಗಾಗ ಕೇಳಿಬರುತ್ತಿದೆ. ಇಂತಹ ನಿರ್ಧಾರ ಇಲ್ಲಿ ಯಾವಾಗ ಜಾರಿಗೆ ಬರಲಿದೆ ಕಾದು ನೋಡಬೇಕಿದೆ.


