ರಾಯಚೂರು: ರೈಲ್ವೇ ಮೈದಾನದಲ್ಲಿ ಯುವಕನ ಶವ ಪತ್ತೆ
ರಾಯಚೂರು: ರಾಯಚೂರು ರೈಲ್ವೇ ಮೈದಾನದಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದ್ದು, ವೀರೇಶ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ವೀರೇಶ್ ಏ. 29 ರಂದು ಸ್ನೇಹಿತರ ಜತೆಗೆ ಪಾರ್ಟಿಗೆಂದು ಹೋಗಿದ್ದ. ಆದರೆ, ಮನೆಗೆ ವಾಪಸ್ ಬಂದಿರಲಿಲ್ಲ. ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಮನೆಯವರು ಗಾಬರಿಯಿಂದ ಸ್ನೇಹಿತರ ಬಳಿಯೆಲ್ಲ ವಿಚಾರಿಸಿದ್ದರು. ಆದರೆ, ಯಾರೊಬ್ಬರೂ ಈ ಬಗ್ಗೆ ಏನೂ ಮಾಹಿತಿ ನೀಡಿರಲಿಲ್ಲ.
ಆದರೆ, ಗುರುವಾರ ಬೆಳಗ್ಗೆ ಮೈದಾನದಲ್ಲಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಸ್ಥಿತಿಯಲ್ಲಿ ಶವ ಬಿದ್ದಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ, ಮೃತ ವ್ಯಕ್ತಿ ವೀರೇಶ್ ಎಂದು ಗುರುತಿಸಿದ್ದಾರೆ.
ವೀರೇಶ್ ಇತ್ತೀಚಿಗೆ ಪ್ರೀತಿಸಿ ಮದುವೆಯಾಗಿದ್ದರು. ಆತನ ಪತ್ನಿ ಪಲ್ಲವಿ ಏಳು ತಿಂಗಳ ಗರ್ಭಿಣಿ ಎಂದು ತಿಳದುಬಂದಿದ್ದು, ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


