ಆರೋಗ್ಯ ಸುದ್ದಿ

ಶಿಶುವಿನ ಉದರದಲ್ಲಿತ್ತು ಭ್ರೂಣ!

Share It

ಬೆಳಗಾವಿ: ಭ್ರೂಣದ ಹೊಟ್ಟೆಯಲ್ಲೇ ಬೆಳೆದಿದ್ದ ಮತ್ತೊಂದು ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ಇಲ್ಲಿನ ಕೆಎಲ್‌ಇ ವೈದ್ಯರು, ಬಾಣಂತಿ ಮತ್ತು ನವಜಾತ ಶಿಶುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಗರ್ಭಿಣಿ ಮಹಿಳೆಯಲ್ಲಿದ್ದ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತಿರುವದನ್ನು ಗಮನಿಸಿದ ವೈದ್ಯರು ಹೆರಿಗೆ ನಂತರ, ನವಜಾತ ಶಿಶುವಿನ ಹೊಟ್ಟೆಯೊಳಗೆ ಬೆಳೆಯುತ್ತಿದ್ದ ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಚಂದಗಡದ ಏಳು ತಿಂಗಳ ಗರ್ಭಿಣಿಯನ್ನು ಗಡಹಿಂಗ್ಲಜನ ಡಾ. ಸಂಜಯ ಶಾನಬಾಗ ಅವರು ತಪಾಸಣೆಗೊಳಪಡಿಸಿದಾಗ ಮೊದಲು ಚೀಲದಂತೆ ಕಂಡಿತು. ನಂತರ ಸಮಗ್ರವಾಗಿ ತಪಾಸಿಸಿದಾಗ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತಿರುವದು ಕಂಡು ಬಂದಿತು. ವೈದ್ಯರು ನಿರಂತರವಾಗಿ ನಿಗಾದಲ್ಲಿಟ್ಟು 37 ವಾರಗಳ ನಂತರ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಂತರ ಮಗುವಿನ ಜೀವಕ್ಕೆ ತೊಂದರೆಯಾಗಬಾರದೆಂದು ಸ್ಥಳೀಯ ವೈದ್ಯರು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಕಳಹಿಸಿಕೊಟ್ಟರು. ತಡಮಾಡದ ವೈದ್ಯರು ಎರಡು ದಿನದ ನವಜಾತ ಶಿಶುವನ್ನು ತಪಾಸಣೆಗೊಳಪಡಿಸಿ ಶಸ್ತ್ರಚಿಕಿತ್ಸೆಯ ಮೂಲಕ ಹೊಟ್ಟೆಯೊಳಗಿರುವ ಭ್ರೂಣವನ್ನು ಹೊರತೆಗೆದಿದ್ದಾರೆ.

ಅವಳಿ ಆಮ್ನಿಯೋಟಿಕ್ ಚೀಲವು ಪ್ರಮುಖ ನಾಳಗಳಾದ ಐವಿಸಿ, ಬಲಬದಿಯ ಮೂತ್ರಪಿಂಡ ನಾಳ ಹಾಗೂ ಮಹಾಪಧಮನಿಯ ಮಧ್ಯದಲ್ಲಿ ಬೆಳೆಯುತ್ತಿತ್ತು. ಅತ್ಯಂತ ಕ್ಲಿಷ್ಟಕರವಾದ ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಗರ್ಭಧಾರಣೆಯ ಪ್ರಥಮದಲ್ಲಿ ಕೆಲವು ವಾರ ಇನ್ನೊಂದು ಭ್ರೂಣವು ಸುತ್ತುವರೆದು ಅದು ಮರೆಯಾಗುತ್ತದೆ.

ನಂತರ ಈ ರೀತಿಯಾಗಬಹುದು. ಆದರೆ ಅವಳಿಯ ರಕ್ತ ಪೂರೈಕೆಯನ್ನು ಅವಲಂಬಿಸಿ ಭ್ರೂಣದ ಗಾತ್ರ ಹೆಚ್ಚುತ್ತಲಿರುತ್ತದೆ. ಸುಮಾರು ಆರು ಲಕ್ಷ ಗರ್ಭಿಣಿಯರ ಪೈಕಿ ಒಬ್ಬರಲ್ಲಿ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುವದು ಕಂಡು ಬರುತ್ತದೆ. ಆದರೆ ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರಾದ ಡಾ. ಸ್ವಪ್ನಿಲ ಪಟ್ಟಣಶೆಟ್ಟಿ ಅವರು ಹೇಳುತ್ತಾರೆ.

ಶಸ್ತ್ರಚಿಕಿತ್ಸಕರಾದ ಡಾ. ಸ್ವಪ್ನಿಲ್ ಪಟ್ಟಣಶೆಟ್ಟಿ ಅವರಿಗೆ ಡಾ. ಸಕ್ಷಮ, ಅರಿವಳಿಕೆ ತಜ್ಞವೈದ್ಯ ಡಾ. ರಾಜೇಶ್ ಮಾನೆ ಮತ್ತು ಡಾ. ಪ್ರಿಯಾಂಕಾ ಗಾಡ್ವಿ ಅವರಿಗೆ ಶಸ್ತ್ರಚಿಕಿತ್ಸೆಗೆ ಸಹಕರಿಸಿದರು. ನಂತರ ತೀವ್ರ ನಿಗಾ ಘಟಕದಲ್ಲಿ ಡಾ. ಮನೀಷಾ ಭಂಡನಕರ ಹಾಗೂ ಡಾ. ರಾಮ್ ಭಟ್ ಆರೈಕೆ ಮಾಡಿದರು. ಮಗು ಈಗ ಚೇತರಿಸಿಕೊಂಡಿದೆ. ಮಹಾರಾಷ್ಟ್ರದ ಮಹಾತ್ಮಾ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆ ಸಂಪೂರ್ಣ ಉಚಿತವಾಗಿ ನೆರವೇರಿಸಲಾಗಿದೆ.


Share It

You cannot copy content of this page