!
ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮಂಗಳವಾರ ರಾತ್ರಿ ಹಿಂದುಳಿದ ವರ್ಗಗಳ ಶಾಸಕರು ಸಭೆ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಸಿಎಂ ಹುದ್ದೆ ಕುರಿತ ಚರ್ಚೆ, ಬಣಗಳ ನಡುವೆ ಜಗಳ ನಡೆಯುತ್ತಿರುವ ಬೆನ್ನಲ್ಲೇ ಈ ಸಭೆ ನಡೆದಿದೆ. ಸಭೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಶಾಸಕರು ಬೇಡಿಕೆ ಪಟ್ಟಿಯನ್ನೇ ಸಿದ್ಧಪಡಿಸಿದ್ದಾರೆ.
ಸಮುದಾಯದ ಬೇಡಿಕೆಗಳಿವು:
ಎಸ್ಸಿ, ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳುವುದು.
ಕರ್ನಾಟಕ ರಾಜ್ಯದಲ್ಲಿ ಒಂದು ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸುವುದು.
ಸುರಪುರ ತಾಲ್ಲೂಕಿನ ಬಂಡೊಳ್ಳಿಯಲ್ಲಿ ಇರುವ 17 ಎಕರೆ 21 ಗುಂಟೆ ಜಾಗದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಲು ಸುಮಾರು 25 ಕೋಟಿ ರೂ.ಗಳ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
ಪ್ರತೀ ವರ್ಷ ಸರ್ಕಾರದಿಂದ ಬುಡಕಟ್ಟು ವಾಲ್ಮೀಕಿ ಜನಾಂಗದ ಇತಿಹಾಸ, ಸಂಸ್ಕೃತಿ, ಕಲೆಗಳನ್ನು ಪ್ರೋತ್ಸಾಹಿಸಿ ಜನಗಳಿಗೆ ಪರಿಚಯಿಸುವುದು.
ಚಿತ್ರದುರ್ಗದಲ್ಲಿ ದುರ್ಗೋತ್ಸವ ಎಂಬ ಕಾರ್ಯಕ್ರಮವನ್ನು ರಾಣಿಚನ್ನಮ್ಮ ಇತಿಹಾಸ ಬಿಂಬಿಸುವ ಕಿತ್ತೂರು ಉತ್ಸವ, ಹಂಪಿ ಉತ್ಸವ ಮಾದರಿಯಲ್ಲಿ ಆಯೋಜಿಸುವುದು. ಇದು ನಾಯಕರ ಪರಾಕ್ರಮಗಳ ಕಲೆಗಳನ್ನು ಬಿಂಬಿಸುವ ಸಾಂಸ್ಕೃತಿಕ ದುರ್ಗೋತ್ಸವ ಆಗಬೇಕೆಂದು ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸುವುದು.
ಇತ್ತೀಚೆಗೆ ರಾಯಚೂರಿನಲ್ಲಿ 25 ಮಂದಿ ಎಸ್ಸಿ-ಎಸ್ಟಿ ಸಮುದಾಯದ ಹೋರಾಟಗಾರರ ಮೇಲೆ ಹೂಡಿದ ಕೇಸ್ಗಳನ್ನು ರಾಜ್ಯಸರ್ಕಾರ ತಕ್ಷಣ ಹಿಂತೆಗೆದುಕೊಳ್ಳಲು ಒತ್ತಾಯಿಸುವುದು.
ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಶಿವಭಕ್ತ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನ, ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ಮಹಾಸಂಸ್ಥಾನಕ್ಕೆ ಹೊಂದಿಕೊಂಡಿರುವ ನಿವೇಶನವನ್ನು ರಾಜ್ಯಸರ್ಕಾರದಿಂದ ಮಂಜೂರು ಮಾಡಿಸುವ ಕುರಿತು ಒತ್ತಡ ಹೇರುವುದು.
ಪರಿಶಿಷ್ಟ ಪಂಗಡದ ಜನಾಂಗಕ್ಕೆ ಮೀಸಲಿಟ್ಟ ಹಣವು ದುರ್ಬಳಕೆಯಾಗದೇ ಸಮರ್ಪಕವಾಗಿ ಜನಾಂಗಕ್ಕೆ ತಲುಪಿಸಿ ನಿಗದಿತ ಅವಧಿಯೊಳಗೆ ಪೂರ್ತಿ ಹಣ ಖರ್ಚಾಗುವಂತೆ ನೋಡಿಕೊಳ್ಳುವುದು.
ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಎಸ್ಟಿ ಶಾಸಕರ ಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ ಭಾಗಿಯಾಗಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆಗಿನ ಸಭೆಗೆ ಗೈರಾಗಿದ್ದ ಅವರು ಸಮುದಾಯದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದರೊಂದಿಗೆ, ಕೆ.ಎನ್ ರಾಜಣ್ಣ ಹಾಗೂ ಡಿ.ಕೆ ಶಿವಕುಮಾರ್ ಸಮರ ಮುಂದುವರಿದಂತಾಗಿದೆ.
ಅಪೆಕ್ಸ್ ಬ್ಯಾಂಕ್ ವಿಚಾರವಾಗಿ ಕೆ.ಎನ್ ರಾಜಣ್ಣ ಜತೆ ಸಭೆ ಮಾಡಲು ಡಿ.ಕೆ ಶಿವಕುಮಾರ್ ತೆರಳಿದ್ದರು. ವಿಧಾನಸೌಧದ ಸಚಿವ ಕೆ.ಎನ್ ರಾಜಣ್ಣ ಕೊಠಡಿಗೆ ತೆರಳಿದ್ದರು. ಆದರೆ, ಆರೋಗ್ಯ ಸರಿಯಿಲ್ಲ ಎಂಬ ಕಾರಣ ನೀಡಿ ಸಚಿವ ಕೆ.ಎನ್ ರಾಜಣ್ಣ ಸಭೆಗೆ ಬಂದಿರಲಿಲ್ಲ. ಹೀಗಾಗಿ ಸಚಿವ ಕೆ.ಎನ್ ರಾಜಣ್ಣ ಕೊಠಡಿಯಲ್ಲಿ ಕಾದು ಡಿಸಿಎಂ ಡಿ.ಕೆ ಶಿವಕುಮಾರ್ ವಾಪಸ್ ಹೋಗಿದ್ದರು. ಆದರೆ, ಹುಷಾರಿಲ್ಲದ ಸಚಿವ ಕೆ.ಎನ್ ರಾಜಣ್ಣ ಅತ್ತ ವಾಲ್ಮೀಕಿ ಸಮುದಾಯದ ಸಭೆಗೆ ಹಾಜರಾಗಿದ್ದಾರೆ! ಈ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆಗಿನ ಅವರ ಮುನಿಸು ಮತ್ತೊಮ್ಮೆ ಬಹಿರಂಗವಾಗಿದೆ.