ರಾಜಕೀಯ ಸುದ್ದಿ

ಕಾಂಗ್ರೆಸ್ ವಿರುದ್ಧ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸ್ಫೋಟಕ ಹೇಳಿಕೆ

Share It

ನವದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದಲಿತರ ಬಗ್ಗೆ ನಿರ್ಲಕ್ಷ್ಯ ಮತ್ತು ತಿರಸ್ಕಾರದ ಭಾವನೆ ಹೊಂದಿವೆ. ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ದಲಿತರು ಬಿಎಸ್​ಪಿಗೆ ಮತ ಚಲಾಯಿಸುವಂತೆ ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಕರೆ ನೀಡಿದ್ದಾರೆ.

ಮತ ಚಲಾಯಿಸುವಾಗ ಮತದಾರರು ಐತಿಹಾಸಿಕ ನಿರ್ಲಕ್ಷ್ಯದ ಬಗ್ಗೆ ಜಾಗರೂಕರಾಗಿರಬೇಕು. ವಿಧಾನಸಭಾ ಚುನಾವಣೆ ನಡೆಯಲಿರುವ ಸಮಯದಲ್ಲಿ ಕಾಂಗ್ರೆಸ್ ದಲಿತರನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವುದು ಮತ್ತು ತಿರಸ್ಕಾರ ಭಾವನೆಯಿಂದ ನೋಡುತ್ತಿರುವುದು ಪಕ್ಷದೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ತೋರಿಸುತ್ತದೆ.

ಆ ಪಕ್ಷದ ನಿಲುವುಗಳು ಈಗ ಸರಿಯಾಗಿಲ್ಲ ಎಂದ ಮೇಲೆ ಭವಿಷ್ಯದಲ್ಲಿ ನಾವು ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯ? ಹೀಗಾಗಿ ದಲಿತರು ಕಾಂಗ್ರೆಸ್​ ಅಥವಾ ಬಿಜೆಪಿಗೆ ಮತ ನೀಡಿ ತಮ್ಮ ಮತವನ್ನು ವ್ಯರ್ಥ ಮಾಡಬಾರದು” ಎಂದು ಮಾಯಾವತಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

“ದಲಿತರು ಬಿಎಸ್​ಪಿಗೆ ಸಾಮೂಹಿಕವಾಗಿ ಮತ ಚಲಾಯಿಸಬೇಕು. ದಲಿತರ ಹಿತಾಸಕ್ತಿ ರಕ್ಷಿಸಲು, ಅವರ ಕಲ್ಯಾಣ ಖಚಿತ ಪಡಿಸಿಕೊಳ್ಳಲು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ನಿರಂತರವಾಗಿ ಹೋರಾಡುವ ಏಕೈಕ ಪಕ್ಷ ಬಿಎಸ್​ಪಿ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್, ಬಿಜೆಪಿ ಅಥವಾ ಇತರ ಯಾವುದೇ ಮೈತ್ರಿಕೂಟಗಳ ಸುಳ್ಳು ಭರವಸೆಗಳಿಂದ ಪ್ರಭಾವಿತರಾಗದಂತೆ ಜಮ್ಮು ಮತ್ತು ಕಾಶ್ಮೀರದ ದಲಿತ ಸಮುದಾಯಕ್ಕೆ ಮನವಿ ಮಾಡಿದರು. ಆ ಪಕ್ಷಗಳ ದಲಿತ ವಿರೋಧಿ ಇತಿಹಾಸ ಗಮನದಲ್ಲಿಟ್ಟುಕೊಂಡು, ದಲಿತರು ತಮ್ಮ ಮತಗಳನ್ನು ಬಿಎಸ್​ಪಿಗೆ ಮಾತ್ರ ಚಲಾಯಿಸಬೇಕು ಎಂದು ಹೇಳಿದರು.

ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ಪಿ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್​ಡಿ)ದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದ್ದು, 90 ಸ್ಥಾನಗಳ ಪೈಕಿ 37 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪ್ರಸ್ತುತ, ಹರಿಯಾಣ ವಿಧಾನಸಭೆಯಲ್ಲಿ ಬಿಎಸ್​ಪಿ ಶಾಸಕರಿಲ್ಲ. ಐಎನ್ಎಲ್​​ಡಿಯ ಅಭಯ್ ಚೌಟಾಲಾ ಆ ಪಕ್ಷದ ಏಕೈಕ ಶಾಸಕರಾಗಿದ್ದಾರೆ.

ಈ ಹಿಂದೆ 2014ರಿಂದ 2019ರವರೆಗೆ ಹರಿಯಾಣ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದ ಚೌಟಾಲಾ, ಪ್ರಸ್ತುತ ವಿಧಾನಸಭೆಯಲ್ಲಿ ಐಎನ್ಎಲ್​ಡಿಯ ಏಕೈಕ ಪ್ರತಿನಿಧಿಯಾಗಿ ಉಳಿದಿದ್ದಾರೆ. ಎರಡೂ ಪಕ್ಷಗಳು 2024ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದವು. ಆದರೆ ಆ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಹೇಳಿಕೊಳ್ಳುವ ಯಶಸ್ಸು ಸಿಕ್ಕಿರಲಿಲ್ಲ. ಐಎನ್ಎಲ್​ಡಿ ಶೇ 1.74ರಷ್ಟು ಮತ ಪಡೆದರೆ, ಬಿಎಸ್​ಪಿ ಶೇ 1.28ರಷ್ಟು ಮತ ಗಳಿಸಿದೆ. ಐಎನ್ಎಲ್​ಡಿ 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಎಸ್​ಪಿ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.


Share It

You cannot copy content of this page