ನವದೆಹಲಿ: ಮಧ್ಯ ಕರ್ನಾಟಕದ 4 ಜಿಲ್ಲೆಗಳಿಗೆ ಮೀಸಲಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಘೋಷಿಸಲಾಗಿರುವ 5300 ಕೋಟಿ ರೂಪಾಯಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.
ಇಂದು ಲೋಕಸಭೆಯ ಕಲಾಪದಲ್ಲಿ ಎದ್ದುನಿಂತು ಮಾತನಾಡಿದ ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಕಳೆದ 5 ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮಧ್ಯಕರ್ನಾಟಕದ ರೈತರ ಒತ್ತಾಸೆಯಾಗಿರುವ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆ ಇನ್ನೂ ಜಾರಿಯಾಗಿಲ್ಲ. ಇದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಬೇಸಿಗೆ ಕಾಲದ ವೇಳೆ ಕುಡಿಯುವ ನೀರಿನ ಸಮಸ್ಯೆ ಅತೀವವಾಗಿ ಕಾಡುತ್ತಿದೆ.
ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಸೂಕ್ಷ್ಮ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಗಳಿಗೆ ಬೇಕಾದ ಭದ್ರಾ ಮೇಲ್ದಂಡೆ ಯೋಜನೆ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರನ್ನು ಸಹ ಒದಗಿಸುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಘೋಷಿಸಿರುವಂತೆ ರಾಷ್ಟ್ರೀಯ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಚಿತ್ರದುರ್ಗ ಜಿಲ್ಲೆಯ ರೈತರ 5 ದಶಕಗಳ ನೀರಾವರಿ ಹೋರಾಟಕ್ಕೆ ಅಂತ್ಯ ಹಾಡಬೇಕು ಎಂದು ಒತ್ತಾಯಿಸಿದರು.