ಹೊಸದಿಲ್ಲಿ: ಶಾಲೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಹುಸಿ ಬೆದರಿಕೆ ಕರೆ ಮತ್ತೊಮ್ಮೆ ಮುಂದುವರಿದಿದ್ದು, ದೆಹಲಿಯ ಅನೇಕ ಶಾಲೆಗಳಿಗೆ ಇಂತಹದ್ದೇ ಬೆದರಿಕೆ ಬಂದಿದ್ದು ಶುಕ್ರವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕಳೆದ ಒಂದು ವಾರದಲ್ಲಿ ಇದು ಎರಡನೇ ಬಾರಿಗೆ ಇಂತಹ ಕರೆಗಳು ಬಂದಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಆಗಮಿಸಿದ ಪೋಷಕರು ತಮ್ಮ ಮಕ್ಕಳನ್ನು ರಜೆ ನೀಡಿ ಕಳುಹಿಸುವಂತೆ ಶಿಕ್ಷಕರ ಮೇಲೆ ಒತ್ತಡ ಹಾಕಿದರು.
ಪಶ್ಚಿಮ ವಿಹಾರ್‌ನ ಭಾರತ್ ನಗರ ಇಂಟರ್ ನ್ಯಾಷನಲ್ ಸ್ಕೂಲ್, ಶ್ರೀನಿವಾಸ ಪುರಿಯ ಕೇಂಬ್ರಿಡ್ಜ್ ಸ್ಕೂಲ್ ಹಾಗೂ ಪಶ್ಚಿಮ ಕೈಲಾಶ್‌ನ ಡಿಪಿಎಸ್ ಅಮರ್ ಕಾಲನಿ ಶಾಲೆಗಳಿಗೆ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗಿದೆ. ಅಗ್ನಿಶಾಮಕ ದಳಕ್ಕೆ ಇಂತಹ ಕರೆಗಳು ಬಂದಿದ್ದು, ಭಾರತ್ ನಗರ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಬೆಳಗ್ಗಿನ ಜಾವ 4. 21 ರಲ್ಲಿ, ಕೇಂಬ್ರಿಡ್ಜ್ ಶಾಲೆಗೆ ಬಾಂಬ್ ಇಟ್ಟಿರುವುದಾಗಿ 6.23 ರಲ್ಲಿ ಹಾಗೂ ಡಿಪಿಎಸ್ ಶಾಲೆಗೆ ಬಾಂಬ್ ಇಟ್ಟಿರುವುದಾಗಿ 6.35 ರಲ್ಲಿ ಕರೆ ಮಾಡಲಾಗಿತ್ತು ಎನ್ನಲಾಗಿದೆ.
ಇದೇ ರೀತಿ ಅನೇಕ ಕರೆಗಳು ಬಂದಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್ ಪತ್ತೆ ತಂಡಗಳು ಶಾಲೆಗಳಿಗೆ ಆಗಮಿಸಿ, ಪರಿಶೀಲನೆ ನಡೆಸಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. ಕರೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಸಂಬAಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.