ಬೆಂಗಳೂರು: ಗಡಿರೇಖೆಯ ಬಳಿ ಸಿಡಿದ ಐಇಡಿ ಸ್ಫೋಟಕ್ಕೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಇಬ್ಬರು ಯೋಧರು ಏಪ್ರಿಲ್‌ನಲ್ಲಿ ತಾವು ವೈವಾಹಿಕ ಜೀವನಕ್ಕೆ ಅಡಿಯಿಡುವ ತಯಾರಿ ನಡೆಸಿದ್ದರು ಎಂಬ ಮನಕಲಕುವ ವಿಷಯ ಇದೀಗ ಗೊತ್ತಾಗಿದೆ.
ಜಾರ್ಖಂಡ್‌ನ ಹಜಾರಿಬಾಗ್ ಮತ್ತು ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಈ ಎರಡು ಯೋಧರ ಕುಟುಂಬಗಳ ತಮ್ಮ ಮಕ್ಕಳ ಮದುವೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇದೀಗ ಆ ಕುಟುಂಬಗಳಿಗೆ ಬರಸಿಡಿಲು ಬಡಿದಂತಾಗಿದ್ದು, ಮಕ್ಕಳ ಸಾವು ಮದುವೆಯ ಕನಸನ್ನು ನುಚ್ಚುನೂರಾಗಿಸಿದೆ.
ಜಮ್ಮುವಿನ ಅಖ್ನೂರ್ ಸೆಕ್ಟರ್‌ನ ಗಡಿರೇಖೆಯ ಬಳಿ ಬಯೋತ್ಪಾದಕರು ದಾಳಿ ಮಾಡಿದಾಗ 27 ವರ್ಷದ ಕ್ಯಾಪ್ಟನ್ ಕರಮ್‌ಜಿತ್ ಸಿಂಗ್ ಬಕ್ಷಿ ಮತ್ತು 26 ವರ್ಷದ ನಾಯಕ್ ಮುಖೇಶ್ ಸಿಂಗ್ ಮನ್ಹಾಸ್ ಗಸ್ತು ಐಇಡಿ ಸ್ಫೋಟಕ್ಕೆ ಬಲಿಯಾಗಿದ್ದಾರೆ.
ಹಜಾರಿಬಾಗ್‌ನಲ್ಲಿ ಕ್ಯಾಪ್ಟನ್ ಕರಮ್‌ಜಿತ್ ಕುಟುಂಬ ಏಪ್ರಿಲ್ 5 ರಂದು ಅವರ ಮದುವೆ ಮಾಡುವ ಸಿದ್ಧತೆ ನಡೆಸಿತ್ತು. ಮನೆಗೆ ಸುಣ್ಣಬಣ್ಣ ಬಳಿಯುವ ಕೆಲಸಗಳು ಜೋರಾಗಿ ನಡೆದಿದ್ದವು. ತಂದೆ ಅಜೀಂದರ್ ಬಕ್ಷಿ ಮತ್ತು ತಾಯಿ ನೀಲು ಬಕ್ಷಿ ಅವರಿಗೆ ಕರಮ್‌ಜಿತ್ ಏಕೈಕ ಪುತ್ರನಾಗಿದ್ದರು.
ಇನ್ನು ಸಾಂಬಾದ ಗಡಿ ಗ್ರಾಮವಾದ ಬ್ರಿಕಮಿಲಾದಲ್ಲಿ ನಾಯಕ್ ಮುಖೇಶ್ ಕುಟುಂಬ ಹೊಸದಾಗಿ ನಿರ್ಮಿಸಿದ್ದ ತಮ್ಮ ಮನೆಗೆ ಅಂತಿಮ ಸ್ಪರ್ಶ ನೀಡುವ ಸಿದ್ಧತೆಯಲ್ಲಿತ್ತು. ಜ.28 ರವರೆಗೆ ರಜೆಯಲ್ಲಿದ್ದ ಮುಖೇಶ್, ಮನೆ ಕಟ್ಟುವ ಕೆಲಸ ಪೂರ್ಣಗೊಳಿಸಿ ವಾಪಸ್ಸಾಗಿದ್ದರು. ಏಪ್ರಿಲ್ 20-21ಕ್ಕೆ ಇವರ ಮದುವೆ ನಿಗದಿಯಾಗಿತ್ತು.