ಬೆಂಗಳೂರು: ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಯೋಸಹಜವಾದ ಅನಾರೋಗ್ಯದಿಂದ ಸರೋಜಾ ಅವರು ಬಳಸಲುತ್ತಿದ್ದರು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ಬೆಳಗ್ಗಿನ ಜಾವ ಮೃತಪಟ್ಟಿದ್ದಾರೆ. ಸುದೀಪ್ ಅವರ ಸಾಧನೆಯ ಹಾದಿಯಲ್ಲಿ ತಾಯಿ ಸರೋಜಾ ಬಹುಮುಖ್ಯ ಪಾತ್ರವಹಿಸಿದ್ದರು.
ಇಂದು ಮಧ್ಯಾಹ್ನ ೧೨ ಗಂಟೆ ವೇಳೆಗೆ ಅವರ ಮೃತದೇಹವನ್ನು ಜೆ.ಪಿ. ನಗರದ ಸುದೀಪ್ ನಿವಾಸಕ್ಕೆ ತರಲಾಗುತ್ತದೆ. ಅನಂತರ ಅವರ ಅಂತ್ಯಕ್ರಿಯೆಯ ಸಿದ್ಧತೆಗಳು ನಡೆಯಲಿವೆ. ಅಂತ್ಯಕ್ರಿಯೆ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ಬಿಗ್ ಬಾಸ್ ಶೂಟಿಂಗ್ ಮುಗಿಸಿ ಮನೆಗೆ ಬಂದಿದ್ದ ಸುದೀಪ್ ಅವರಿಗೆ ತಾಯಿಯ ಅಗಲಿಕೆಯ ನೋವು ಕಾಡುತ್ತಿದೆ. ಸುದೀಪ್ ಅವರ ಲಕ್ಷಾಂತರ ಅಭಿಮಾನಿಗಳು ಸುದೀಪ್ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ಹಾಗೂ ರಾಜಕೀಯ ರಂಗದ ಅನೇಕ ಗಣ್ಯರು ಶೋಕ ಸಂದೇಶ ಕಳುಹಿಸಿದ್ದಾರೆ.