ಹೊಸದಿಲ್ಲಿ: ನಾಗರಿಕರ ಆಸ್ತಿಗಳನ್ನು ಬುಲ್ಡೋಜರ್ ಹತ್ತಿಸಿ ನಾಶಗೊಳಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಛರಿಸುವ ಮೂಲಕ ಉತ್ತರ ಪ್ರದೇಶ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಯಾವುದೇ ನಾಗರಿಕ ಸಮಾಜ ವ್ಯವಸ್ಥೆ ಬುಲ್ಡೋಜರ್ ಮೂಲಕ ಅಕ್ರಮ ನಿರ್ಮಾಣ ಅಥವಾ ಅತಿಕ್ರಮಗಳನ್ನು ತೆರವುಗೊಳಿಸುವನ್ನು ಒಪ್ಪುವುದಿಲ್ಲ. ಒಂದು ವೇಳೆ ತೆರವುಗೊಳಿಸಬೇಕಾದ ಅನಿವಾರ್ಯ ಸಂದರ್ಭ ಒದಗಿದರೆ, ಅದಕ್ಕೆ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಪೀಠ ಅಭಿಪ್ರಾಯಪಟ್ಟಿದೆ.
ನವೆಂಬರ್ 6 ರಂದು ಪ್ರಕಟವಾಗಿರು ತೀರ್ಪಿನಲ್ಲಿ ಚಂದ್ರಚೂಡ್ ಅವರು, ಈ ವಿಷಯವನ್ನು ಉಲ್ಲೇಖಿಸಿದ್ದು, 2019 ರಲ್ಲಿ ಉತ್ತರ ಪ್ರದೇಶ ಸರಕಾರ ಮಹಾರಾಜ್ ಗಂಜ್‌ನಲ್ಲಿ ಮನೆ ಧ್ವಂಸ ಮಾಡಿದ್ದ ಪ್ರಕರಣದಲ್ಲಿ ಈ ರೀತಿಯಲ್ಲಿ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಮನೆ ಕಳೆದುಕೊಂಡವರಿಗೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ 25 ಲಕ್ಷ ರು.ಗಳ ಮಧ್ಯಂತರ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ. ಆ ಮೂಲಕ ಉತ್ತರ ಪ್ರದೇಶ ಸರಕಾರಕ್ಕೆ ಬುಲ್ಡೋಜರ್ ಸಂಸ್ಕೃತಿ ಕೈಬಿಡುವಂಥೆ ಬುದ್ದಿ ಹೇಳಿದೆ.
ಕಾನೂನಿನ ಪ್ರಕಾರ ಬುಲ್ಡೋಜರ್ ಸಂಸ್ಕೃತಿ ಸರಿಯಾದ ಕ್ರಮವಲ್ಲ. 300 ಎ ವಿಧಿಯ ಅಡಿಯಲ್ಲಿ ಸಂವಿಧಾನಿಕ ಮಾನ್ಯತೆಯನ್ನು ಇದು ಕಡೆಗಣಿಸಿದಂತಾಗುತ್ತದೆ. ಇದು ನಾಗರಿಕರ ಆಸ್ತಿ ಹಕ್ಕುಗಳಿಗೆ ವಿರುದ್ಧವಾದುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆ ಮೂಲಕ ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆಯಾದಂತಾಗಿದೆ.