ಜಿಲ್ಲೆ

ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು

Share It

ಮಂಗಳೂರು(ದಕ್ಷಿಣ ಕನ್ನಡ): ಕರಾವಳಿಯಲ್ಲಿ ಉತ್ತುಂಗದ ಕಾಲದಲ್ಲಿಯೇ ಮೀನುಗಾರರಿಗೆ ಸಂಕಷ್ಟ ಎದುರಾಗಿದೆ. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸಮುದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೋಟ್‌ಗಳು ತೆರಳುವ ಕಾಲವಾಗಿದ್ದರೂ, ಈ ಬಾರಿ ಪರಿಸ್ಥಿತಿ ಭಿನ್ನ. ಮೀನುಗಳು ಕಡಿಮೆಯಾಗಿರುವುದು, ಇಂಧನ ಮತ್ತು ಗ್ಯಾಸ್ ಸರಬರಾಜಿನ ಅಡಚಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಹಲವಾರು ಬೋಟ್‌ಗಳು ಸಮುದ್ರಕ್ಕೆ ತೆರಳದೇ ನಿಂತಿವೆ. ಇದೀಗ ಮಂಗಳೂರು ಧಕ್ಕೆಯಲ್ಲಿ ಶೇಕಡ 85ರಷ್ಟು ಬೋಟ್​ಗಳು ಮೀನುಗಾರಿಕೆ ನಿಲ್ಲಿಸಿವೆ.

ಕೆಲ ದಿನಗಳ ಹಿಂದೆ ಮೀನುಗಾರಿಕೆಯ ಬಂಕ್​ಗಳಲ್ಲಿ ಉಂಟಾದ ಡೀಸೆಲ್ ಸರಬರಾಜಿನ ಸಮಸ್ಯೆ ಕೂಡ ಮೀನುಗಾರಿಕೆಗೆ ಹೊಡೆತ ನೀಡಿತ್ತು. ಆ ಸಮಸ್ಯೆ ಇದೀಗ ಬಹುತೇಕ ಸರಿಯಾಗಿದ್ದರೂ, ಅದರ ಪರಿಣಾಮವಾಗಿ ಕೆಲವು ಬೋಟ್‌ಗಳು ಸಮಯಕ್ಕೆ ಸರಿಯಾಗಿ ಸಮುದ್ರಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ, ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳಿಗೆ ಅಗತ್ಯವಾಗುವ ಅಡುಗೆ ಗ್ಯಾಸ್ ಕೊರತೆ ಕೂಡ ಪ್ರಮುಖ ಅಡ್ಡಿಯಾಗಿ ಪರಿಣಮಿಸಿದೆ.ಮಂಗಳೂರು ಟ್ರಾಲ್ ಬೋಟ್ ಅಸೋಸಿಯೇಷನ್ ಅಧ್ಯಕ್ಷ ಚೇತನ್ ಬೆಂಗ್ರೆ ಅವರು ಮಾತನಾಡಿ, “ಸಾಮಾನ್ಯವಾಗಿ ನೂರು ಪ್ರತಿಶತ ಬೋಟ್‌ಗಳು ಸಮುದ್ರಕ್ಕೆ ತೆರಳುತ್ತಿದ್ದವು. ಈಗ ಸುಮಾರು 15 ಪ್ರತಿಶತ ಬೋಟ್‌ಗಳು ಮಾತ್ರ ತೆರಳುತ್ತಿವೆ. ಸಮುದ್ರದ ನೀರಿನ ತಾಪಮಾನ ಮತ್ತು ಜಾಗತಿಕ ಹವಾಮಾನ ಬದಲಾವಣೆ ಪರಿಣಾಮವಾಗಿ ಮೀನುಗಳ ಲಭ್ಯತೆ ಕಡಿಮೆಯಾಗಿದೆ. ಕೆಲ ದಿನಗಳ ಇಂಧನ ಮತ್ತು ಗ್ಯಾಸ್ ಸಮಸ್ಯೆಯೂ ಇದಕ್ಕೆ ಕಾರಣವಾಗಿದೆ” ಎಂದು ತಿಳಿಸಿದ್ದಾರೆ.


Share It

You cannot copy content of this page