ಬೆಂಗಳೂರು: ನಗರದಲ್ಲಿ 2026ರ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಹಾಗೂ ಇಂದಿರಾನಗರ ಸೇರಿ ಪ್ರಮುಖ ಭಾಗಗಳಲ್ಲಿ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರ ಪೊಲೀಸರು ಭದ್ರತಾ ಕ್ರಮಗಳನ್ನು ಗಟ್ಟಿಗೊಳಿಸಿದ್ದಾರೆ. ಈ ನಡುವೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ತಡರಾತ್ರಿ ವಿಶೇಷ ಸೇವೆ ಆರಂಭಿಸಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಎಂ ಜಿ ರಸ್ತೆ ಮೆಟ್ರೋ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಹೊಸ ವರ್ಷಾಚರಣೆಗೆ ತೆರಳುವ ನಾಗರಿಕರಿಗಾಗಿ ಬಿಎಂಟಿಸಿ ವಿಶೇಷ ಮಧ್ಯರಾತ್ರಿ ಬಸ್ ವ್ಯವಸ್ಥೆ ಕಲ್ಪಿಸಿದೆ. ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 2 ಗಂಟೆಯವರೆಗೆ ಎಂ ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಇನ್ನಷ್ಟು ಬಸ್‌ಗಳನ್ನು ನಿಯೋಜಿಸುವುದಾಗಿ ಬಿಎಂಟಿಸಿ ತಿಳಿಸಿದೆ.
ವಿಶೇಷ ಬಸ್ ಸಂಚಾರ ಇರುವ ಮಾರ್ಗಗಳು: ಎಲೆಕ್ಟ್ರಾನಿಕ್ಸ್ ಸಿಟಿ ಪೂರ್ವ, ಜಿಗಣಿ, ಸರ್ಜಾಪುರ, ಕೆಂಗೇರಿ ಕೆಎಚ್‌ಬಿ ಕ್ವಾಟರ್ಸ್, ಜನಪ್ರಿಯ ಟೌನ್‌ಶಿಪ್, ನೆಲಮಂಗಲ ಸೇರಿ ಹಲವು ದಿಕ್ಕುಗಳಿಗೆ ಸೇವೆ ಲಭ್ಯವಿರಲಿದೆ. ಜತೆಗೆ ಯಲಹಂಕ (5ನೇ ಹಂತ), ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿ, ಜೀವನ್ ಭೀಮಾನಗರ ಪ್ರದೇಶಗಳಿಗೂ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಕೆಲ ಮಾರ್ಗಗಳಲ್ಲಿ ನಿಯಮಿತ ಬಸ್ ಸೇವೆ ಮುಂದುವರಿಯಲಿದೆ.
ಮೆಟ್ರೋ ಸಂಚಾರದಲ್ಲಿ ಬದಲಾವಣೆ: ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಸೇವಾ ಅವಧಿಯನ್ನು ವಿಸ್ತರಿಸಿದೆ. ಡಿಸೆಂಬರ್ 31ರ ರಾತ್ರಿ 11ರಿಂದ ಜನವರಿ 1ರ ಬೆಳಗಿನ ಜಾವ 2ರವರೆಗೆ ರೈಲುಗಳು ಸಂಚರಿಸಲಿವೆ. ಆದರೆ ಭದ್ರತಾ ಕಾರಣದಿಂದ ಎಂ ಜಿ ರಸ್ತೆ ಮೆಟ್ರೋ ನಿಲ್ದಾಣವನ್ನು ಸಂಜೆಯಿಂದಲೇ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಪ್ರಯಾಣಿಕರು ಕಬ್ಬನ್ ಪಾರ್ಕ್ ಅಥವಾ ಟ್ರಿನಿಟಿ ವೃತ್ತ ನಿಲ್ದಾಣಗಳನ್ನು ಬಳಸಬೇಕಾಗಿದೆ.
ಭದ್ರತೆ ಗಟ್ಟಿ: ಎಂ ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಜಾರಿಯಲ್ಲಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದ್ದು, ಜನಸಂದಣಿ ಮೇಲ್ವಿಚಾರಣೆಗೆ ರಿಯಲ್‌ಟೈಮ್ ಹೀಟ್‌ಮ್ಯಾಪ್ ತಂತ್ರಜ್ಞಾನ ಬಳಕೆಯಲ್ಲಿದೆ. ಡ್ರೋನ್ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗುತ್ತಿದ್ದು, ತುರ್ತು ಸ್ಪಂದನಾ ತಂಡಗಳು ಸದಾ ಸಜ್ಜಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

