ಹೈಕೋರ್ಟ್ ಆದೇಶದಂತೆ ಏಕರೂಪದ ದರ ನಿಗದಿ ಮಾಡಿದ ಸಾರಿಗೆ ಇಲಾಖೆ
ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಸಾರಿಗೆ ವಾಹನಗಳಲ್ಲಿ ವೆಹಿಕಲ್ ಲೊಕೇಷನ್ ಟ್ರಾಕರ್ ಅಳವಡಿಸುವುದನ್ನು ಕಡ್ಡಾಯ ಮಾಡಿದ್ದು, ಸಾಧನಗಳ ಬೆಲೆ ಕುರಿತು ಸಾರಿಗೆ ಇಲಾಖೆ ಏಕರೂಪದ ವ್ಯವಸ್ಥೆ ಜಾರಿಗೊಳಿಸಿದೆ.
ಅರ್ಹತೆ ಪಡೆದ 12 ಕಂಪನಿಗಳ ವಿಎಲ್‌ಟಿ ಸಾಧನಗಳಿಗೆ ಒಂದೇ ದರ ನಿಗದಿ ಮಾಡಿದ್ದು, ಈ ಕಂಪನಿಗಳು 5,424 ರುಪಾಯಿಗೆ ವಿಎಲ್‌ಟಿ ಸಾಧನವನ್ನು ನೀಡಬೇಕು ಎಂದು ಸೂಚಿಸಲಾಗಿದೆ. ಪ್ರತಿ ಎಮೆರ್ಜನ್ಸಿ ಬಟ್‌ನಗೆ 325 ರು. ನಿಗದಿ ಮಾಡಿದ್ದು, ಹೆಚ್ಚುವರಿ ಪ್ರತಿ ಎಮೆರ್ಜೆನ್ಸಿ ಬಟನ್‌ಗೆ ಮೊತ್ತ ಹೆಚ್ಚಾಗುತ್ತಾ ಹೋಗುತ್ತದೆ.
ವಾರ್ಷಿಕ ನೆಟ್ ವರ್ಕ್ ಮತ್ತು ನಿರ್ವಹಣಾ ವೆಚ್ಚವಾಗಿ 1,800 ರು ನಿಗದಿ ಪಡಿಸುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ. ಶಾಲಾ ವಾಹನ, ಖಾಸಗಿ ಸೇವಾವಾಹನ, ಮ್ಯಾಕ್ಸಿ ಕ್ಯಾಬ್, ಕಾಂಟ್ರಾಕ್ಟ್ ಕ್ಯಾರೇಜ್, ಮೋಟಾರ್ ಕ್ಯಾಬ್, ರಾಷ್ಟ್ರೀಯ ಪರವಾನಗಿ ಪಡೆದಿರುವ ಸರಕು ವಾಹನಗಳಿಗೆ ಸಾಧನ ಅಳವಡಿಕೆ ಕಡ್ಡಾಯವಾಗಿರಲಿದೆ.
ಯೋಜನೆಯ ಮೂಲಕ ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರು, ಅದರಲ್ಲೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಖಚಿತಪಡಿಸಿಕೊಳ್ಳಲು ಅವಕಾಶವಾಗಲಿದೆ.
ಈ ಯೋಜನೆಯ ಭಾಗವಾಗಿ ಸಾರಿಗೆ ಇಲಾಖೆಯು ಆಯುಕ್ತರ ಕಚೇರಿಯಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಪ್ರಾರಂಭಿಸಿದ್ದು, ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಏಕರೂಪದ ದರದಲ್ಲಿ ಸಾಧನಗಳನ್ನು ವಿತರಣೆ ಮಾಡಲು 12 ಕಂಪನಿಗಳನ್ನು ನಿಗದಿಗೊಳಿಸಿ, ಕಾರ್ಯಾದೇಶ ನೀಡಲಾಗಿದೆ.
ವಾಹನ ಮಾಲೀಕರು ಅರ್ಹತಾ ಪ್ರಮಾಣ ಪತ್ರ ನವೀಕರಣ ಮಾಡಿಸಿಕೊಳ್ಳುವ ವೇಳೆ ತಮ್ಮ ವಾಹನಗಳಿಗೆ ವಿಎಲ್‌ಟಿಡಿ ಸಾಧನಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ದರ ಏಕರೂಪದಲ್ಲಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ಸಾರಿಗೆ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ಏಕರೂಪದ ದರ ನಿಗದಿಗೊಳಿಸಿ ಆದೇಶ ಹೊರಡಿಸಲಾಗಿದೆ.
ವಿಎಲ್‌ಟಿ ಸಾಧನದ ಬೆಲೆ : 5424
ಎಮೆರ್ಜೆನ್ಸಿ ಬಟನ್ : 325
ನೆಟ್ ವರ್ಕ್ ಮತ್ತು ನಿರ್ವಹಣೆ ವೆಚ್ಚ : 1800
(ತೆರಿಗೆ ಪ್ರತ್ಯೇಕವಾಗಿರಲಿದೆ)