ಬೆಂಗಳೂರು: ತನ್ನ ಮನೆಯ ಮುಂದೆಯೇ ಆಟೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಇರಿದು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಕೆ.ಪಿ.ಅಗ್ರಹಾರದ ಬಳಿಯ ಮನೆಯ ಮುಂದೆಯೇ ಚಾಕುವಿನಿಂದ ಇರಿದು ರೇಚಣ್ಣ ಎಂಬ ವ್ಯಕ್ತಿಯ ಕೊಲೆ ಮಾಡಲಾಗಿದೆ. ರೇಚಣ್ಣ ಹೊಸ ವರ್ಷದ ಹಿನ್ನೆಲೆಯಲ್ಲಿ ತಡರಾತ್ರಿ ಬಾರ್ನಿಂದ ಕುಡಿದು ಮನೆಗೆ ಬಂದಿದ್ದರು. ಮನೆಯ ಬಾಗಿಲಿನಲ್ಲಿಯೇ ಬಿದ್ದಿದ್ದರು. ಕೆಲವರು ಕುಡಿದು ಬಿದ್ದಿರಬಹುದು ಎಂದು ಭಾವಿಸಿದ್ದರು.
ಸ್ವಲ್ಪ ಸಮಯದ ನಂತರ ಸ್ಥಳೀಯ ನಿವಾಸಿಗಳು ಪರಿಶೀಲನೆ ನಡೆಸಿದಾಗ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ತಕ್ಷಣವೇ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತ ರೇಚಣ್ಣ ಕೊಳ್ಳೇಗಾಲ ಮೂಲದವರಾಗಿದ್ದು, ಆಟೋ ಚಾಲಕರಾಗಿ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ, ಅವರನ್ನು ಕೊಂದಿದ್ದು ಯಾರು ಎಂಬುದು ಗೊತ್ತಾಗಿಲ್ಲ. ಹೀಗಾಗಿ, ಕೊಲೆ ಮಾಡಿದ್ದು ಯಾರು? ಯಾವ ಕಾರಣಕ್ಕೆ ಕೊಲೆ ಮಾಡಿರಬಹುದು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

