ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿ ಕುರಿತು ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿ ಮಾಡಿದ್ದವರೇ ನೀವು ಎಂದು ಗುಡುಗಿದ್ದಾರೆ.
ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿರುವ ಅವರು, ರಾಜಧಾನಿಯ ಅಭಿವೃದ್ಧಿ ಬಗ್ಗೆ ಬಿಜೆಪಿ ನಾಯಕರು ಮಾತನ್ನಾಡುತ್ತಿದ್ದಾರೆ. ಅವರ ಕಾಲದಲ್ಲಿ ಬೀದಿಬೀದಿಯಲ್ಲಿ ಕಸ ಚೆಲ್ಲಾಡುತ್ತಿತ್ತು. ಆಗಾಗ ಕಸದ ಸಮಸ್ಯೆ ವಿಶ್ವಾದ್ಯಂತ ಸದ್ದು ಮಾಡುವ ಮೂಲಕ ನಗರಕ್ಕೆ ಗಾರ್ಬೇಜ್ ಸಿಟಿ ಎಂಬ ಹೆಸರು ಬರುವಂತೆ ಮಾಡಿದ್ದ ಖ್ಯಾತಿ ಬಿಜೆಪಿಯವರದ್ದು ಎಂದು ತಿಳಿಸಿದ್ದಾರೆ.
ನಮ್ಮ ಸರಕಾರ ಕಸದ ವಿಲೇವಾರಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮ ಕಾಲದಲ್ಲಿ ಡಬಲ್ ಡೆಕ್ಕರ್ , ಮೆಟ್ರೋ ಮತ್ತು ಮೇಲ್ಸೇತುವೆಗಳ ನಿರ್ಮಾಣ ಮಾಡಿದ್ದೇವೆ. ನೀವು ಟೀಕೆ ಬಿಟ್ಟರೆ ಏನು ಮಾಡಿದ್ದೀರಿ ಎಂಬುದನ್ನು ವಿವರಿಸಿ ಎಂದು ಸವಾಲು ಹಾಕಿದ್ದಾರೆ.
ಬರೀ ಸುಳ್ಳು ಹೇಳುವುದು, ಸುಳ್ಳು ಮಾಹಿತಿಯನ್ನು ನೀಡಿ ಜನರ ದಾರಿ ತಪ್ಪಿಸುವುದು ಮಾತ್ರವೇ ಬಿಜೆಪಿ ನಾಯಕರ ಕೆಲಸ. ಅವರಿಗೆ ನಗರದ ಅಭಿವೃದ್ಧಿಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ನಗರವನ್ನು ಕೆಟ್ಟ ಸ್ಥಿತಿಗೆ ತಲುಪಿಸಿದ್ದೇ ಬಿಜೆಪಿಗರು ಎಂದು ಟೀಕಿಸಿದ್ದಾರೆ.