ಶಿರಸಿ: ರಾಜ್ಯದಲ್ಲಿ ಇತ್ತೀಚೆಗೆ ಹಸುಗಳ ಮೇಲಿನ ಕ್ರೌರ್ಯ ಮುಂದುವರಿದಿದ್ದು, ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವಿನ ತಲೆ ಕಡಿದು ಹಾಕಿದ್ದಾರೆ. ಬಳಿಕ ಅದರ ದೇಹವನ್ನು ಕೊಂಡೊಯ್ದಿದ್ದಾರೆ. ಗೋಮಾಂಸ ಸೇವನೆಗಾಗಿ ಹಸುವನ್ನು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.
ಶನಿವಾರ (ಜ.18) ಮನೆಯಿಂದ ಮೇಯಲು ಹೋಗಿದ್ದ ಹಸು, ರಾತ್ರಿ ಕಳೆದರೂ ಹಿಂತಿರುಗಿರಲಿಲ್ಲ. ಹೀಗಾಗಿ ಹಸುವಿನ ಮಾಲೀಕ ಕೃಷ್ಣ ಆಚಾರಿ ಇಂದು (ಜ.19 ) ಬೆಳಗ್ಗಿನಿಂದಲೇ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಸುವಿನ ರಕ್ತ, ಕಾಲು ಹಾಗೂ ತಲೆ ಪತ್ತೆಯಾಗಿದೆ. ಗರ್ಭ ಧರಿಸಿದ್ದ ಹಸುವನ್ನು ಕಳೆದುಕೊಂಡು ಮಾಲೀಕ ಕೃಷ್ಣ ಆಚಾರಿ ಆಘಾತಗೊಂಡಿದ್ದಾರೆ.
ಘಟನೆಗೆ ಸಂಬAಧಿಸಿ ಮೃತ ಹಸುವಿನ ಮಾಲೀಕ ಕೃಷ್ಣ ನಾರಾಯಣ ಆಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, 10 ವರ್ಷಗಳಿಂದ ಸಾಕಿದ್ದ ಕಪ್ಪು ಬಣ್ಣದ ಹಸುವನ್ನು ಶನಿವಾರ ಕಳವು ಮಾಡಿ ಹತ್ಯೆಗೈದಿದ್ದಾರೆ. ಬಳಿಕ ಕಾಲುಗಳು, ಕೋಡುಗಳು ಹಾಗೂ ಹಸುವಿನ ಗರ್ಭದಲ್ಲಿದ್ದ ಭ್ರೂಣಾವಸ್ಥೆಯ ಕರುವನ್ನು ಸ್ಥಳದಲ್ಲಿ ಬಿಟ್ಟು, ಮಾಂಸವನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.