ಏಳು ತಿಂಗಳ ಮಗುವಿನ ಮೇಲೆ ಅತ್ಯಾಚಾರ : ಆರೋಪಿಗೆ 80 ದಿನದಲ್ಲೇ ಮರಣದಂಡನೆ ವಿಧಿಸಿದ ನ್ಯಾಯಾಲಯ
ಕೊಲ್ಕತ್ತಾ: ಏಳು ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದ ಕಿರಾತಕನಿಗೆ ಕೊಲ್ಕತ್ತಾದ ಪೋಕ್ಸೋ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಕೇವಲ 80 ದಿನಗಳ ಅಂತರದಲ್ಲಿ ತ್ವರಿತವಾಗಿ ನಡೆದ ವಿಚಾರಣೆಯಲ್ಲಿ 34 ವರ್ಷದ ಆರೋಪಿ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಹೀಗಾಗಿ, ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಆರೋಪಿಯನ್ನು ರಾಜೀವ್ ಘೋಷ್ ಆಲಿಯಾಸ್ ಗೋಬ್ರಾ ಎಂದು ಗುರುತಿಸಲಾಗಿದೆ.
ಇದು ಅಪರೂಪದಲಿ ಅಪರೂಪದ ಪ್ರಕರಣ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಸಂತ್ರಸ್ತ ಮಗುವಿನ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ನೀಡುವಂತೆ ಸರಕಾರಕ್ಕೆ ಸೂಚಿಸಿದೆ. ಜೀವನ್ಮರಣದ ಹೋರಾಟ ನಡೆಸುತ್ತಿರುವ ಮಗುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಧೀಶೆ ಇಂದ್ರಿಲಾ ಮುಖ್ಯೋಪಾಧ್ಯಾಯ ಮಿತ್ರ, ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, ನ್ಯಾಯಾಲಯ ಯೋಚಿಸಬಹುದಾದ ಬೇರೆ ಯಾವುದೇ ಶಿಕ್ಷೆ ಇರಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸಂತ್ರಸ್ತ ಮಗುವಿನ ಪರ ವಾದ ಮಂಡಿಸಿದ್ದ ಸರಕಾರಿ ಅಭಿಯೋಜಕರಾದ ಬಿವಾಸ್ ಚಟರ್ಜಿ, 80 ದಿನಗಳಲ್ಲಿ ನ್ಯಾಯ ಕೊಡಿಸಲು ಸಫಲವಾಗಿದ್ದು, ಜ.4 ರಂದು ಆರೋಪಿಯನ್ನು ಬಂಧಿಸಲಾಗಿತ್ತು. ಪೊಲೀಸರು 26 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು ಎಂದು ತಿಳಿಸಿದ್ದಾರೆ.
ನ.30 ರಂದು ಘಟನೆ ನಡೆದಿತ್ತು. ಡಿ.7 ರಂದು ಆರೋಪಿಯನ್ನು ಬಂಧಿಸಿ, 26 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಜ.7 ರಿಂದ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿತ್ತು. 80 ದಿನಗಳಲ್ಲಿ ಪೂರ್ಣಗೊಂಡಿತು. ಒಟ್ಟು 24 ಸಾಕ್ಷಿಗಳ ವಿಚಾರಣೆ ನಡೆದಿತ್ತು.


