ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಇಂದು ತಮ್ಮ ಹಿರಿಯ ಅಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಕೆ ಮಾಡಲಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಎಸ್ಪಿ ಉದೇಶ್, ಇಂದು ತಮ್ಮ ಹಿರಿಯ ಅಧಿಕಾರಿ ಸುಬ್ರಮಣ್ಯೇಶ್ವರ್ ರಾವ್ಗೆ ವರದಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಅವರು ವರದಿಯನ್ನು ಐಜಿ ಅವರಿಗೆ ಕಳುಹಿಸಿಕೊಡಲಿದ್ದು, ಅಂತಿಮ ಪರಿಶೀಲನೆ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಲಿದೆ.
ಪ್ರಕರಣವನ್ನು ಲೋಕಾಯುಕ್ತತನಿಖೆ ನಡೆಸುತ್ತಿದ್ದರೂ, ಸಿಬಿಐಗೆ ತನಿಖೆಗೆ ವಹಿಸುವಂತೆ ದೂರುದಾರರು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಹೈಕೋರ್ಟ್ ನಿರಾಕರಿಸಿದ್ದು, ಲೋಕಾಯುಕ್ತ ತನಿಖೆಯೇ ನಡೆಯಲಿ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ವರದಿ ಮಹತ್ವ ಪಡೆದುಕೊಂಡಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಹಾಗೂ ಬೈರತಿ ಸುರೇಶ್ ಅವರಿಗೂ ಪ್ರಕರಣದಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಲೋಕಾಯುಕ್ತ ವರದಿಯಲ್ಲೇನಿದೆ ಎಂಬುದು ಇದೀಗ ಬಹುಮುಖ್ಯ ಕುತೂಹಲವಾಗಿದೆ.
