ಬೆಂಗಳೂರು: ರಾಜಧಾನಿಯಲ್ಲಿ ಕಟ್ಟಡ ಕುಸಿತಕ್ಕೆ ಎಂಟು ಮಂದಿ ಕಾರ್ಮಿಕರು ಬಲಿಯಾಗಿದ್ದು, ಅಕ್ರಮ ಕಟ್ಟಡಕ್ಕೆ ಅನುಮತಿ ನೀಡಿದ ಆರೋಪದಲ್ಲಿ ಬಿಬಿಎಂಪಿ ಎಂಜಿನಿಯರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.
ಅನಧಿಕೃತವಾಗಿ, ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದರಿಂದಾಗಿ ಕಟ್ಟಡ ಕುಸಿತ ಉಂಟಾಗಿ ಎಂಟು ಮಂದಿ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೊರಮಾವು ಉಪವಿಭಾಗದ ಬಿಬಿಎಂಪಿ ಸಹಾಯP ಎಂಜಿನಿಯರ್ ವಿನಯ್ ಕೆ. ಅವರನ್ನು ಅಮಾನತುಗೊಳಿಸಲಾಗಿದೆ.
ವಿನಯ್ ಅವರು, ಕಟ್ಟಡ ಮಾಲೀಕರಿಗೆ ಕಟ್ಟಡ ನಿರ್ಮಾಣದಲ್ಲಿ ಬಿಬಿಎಂಪಿಯ ನಿಯಮಗಳನ್ನು ಉಲ್ಲಂಘನೆ ಮಾಡಿ, ಕಟ್ಟಡ ನಿರ್ಮಾಣ ಮಾಡುತ್ತಿದ್ದೀರಿ ಎಂಬ ಬಗ್ಗೆ ನೊಟೀಸ್ ನೀಡಿದ್ದರು. ಆದರೂ, ಮಾಲೀಕರು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತಡೆಯಲು ಎಂಜಿನಿಯರ್ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.
ಘಟನೆಯ ಸ್ಥಳಕ್ಕೆ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ಭೇಟಿಯ ವೇಳೆ ಸಂತ್ರಸ್ತರಿಗೆ ಸಾಂತ್ವನ ಹೇಳುವ ಜತೆಗೆ, ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದರು. ಡಿಸಿಎಂ ಸೂಚನೆ ಬೆನ್ನಲ್ಲೇ ಸಹಾಯಕ ಎಂಜಿನಿಯರ್ ಅಮಾನತು ಮಾಡಿ ಬಿಬಿಎಂಪಿ ಉಪಾಯುಕ್ತರು ಆದೇಶ ಹೊರಡಿಸಿದ್ದಾರೆ.