ನಿಗದಿಗಿಂತ ಅಧಿಕ ಸಮಯ ಜಾಹೀರಾತು ಪ್ರದರ್ಶನ: PVR inoxಗೆ 1 ಲಕ್ಷ ರು. ದಂಡ
ಬೆAಗಳೂರು: ಸಿನಿಮಾ ವೀಕ್ಷಣೆ ವೇಳೆ ಅತಿಯಾದ ಜಾಹೀರಾತು ಪ್ರದರ್ಶನ ಮಾಡಿದ ಕಾರಣಕ್ಕಾಗಿ ಬೆಂಗಳೂರಿನ ಪಿವಿಆರ್ ಐನಾಕ್ಸ್ ಚಿತ್ರಮಂದಿರಕ್ಕೆ ಗ್ರಾಹಕರ ನ್ಯಾಯಾಲಯ 1 ಲಕ್ಷ ರುಪಾಯಿ ದಂಡ ವಿಧಿಸಿದೆ.
ಸಂಜೆ 4.05 ಕ್ಕೆ ಪ್ರಾರಂಭವಾಗಬೇಕಿದ್ದ ಸಿನಿಮಾವನ್ನು 4.30 ರವರೆಗೆ ವಿಳಂಬ ಮಾಡಿ ಪ್ರದರ್ಶನ ಮಾಡಿದ್ದಕ್ಕಾಗಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ಪಿವಿಆರ್ ಐನಾಕ್ಸ್ ಸಮೂಹವನ್ನು ತಪ್ಪಿತಸ್ಥರೆಂದು ತೀರ್ಮಾನಿಸಿದೆ. ದಂಡ ವಿಧಿಸುವ ಜತೆಗೆ ಸಿನಿಮಾ ಆರಂಭದ ಸಮಯವನ್ನು ಸ್ಪಷ್ಟವಾಗಿ ತಿಳಿಸುವಂತೆ ಸೂಚಿಸಿದೆ.
ಡಿ.2023 ರಲ್ಲಿ ರಾವ್ ಬಹದ್ದೂರ್ ಚಿತ್ರದ ವೀಕ್ಷಣೆಗೆಂದು ವ್ಯಕ್ತಿಯೊಬ್ಬರು ತನ್ನ ಕುಟುಂಬದ ಇಬ್ಬರು ಸದಸ್ಯರ ಜತೆಗೆ ಪಿವಿಆರ್‌ಗೆ ಆಗಮಿಸಿದ್ದರು. ಸಂಜೆ 4.05ಕ್ಕೆ ಆರಂಭವಾಗಬೇಕಿದ್ದ ಸಿನಿಮಾವನ್ನು 4.30 ಕ್ಕೆ ಆರಂಭಿಸಲಾಗಿತ್ತು. ಅಲ್ಲಿಯವರೆಗೆ ಜಾಹೀರಾತುಗಳ ಪ್ರದರ್ಶನವನ್ನೇ ಮಾಡಲಾಗುತ್ತಿತ್ತು.

ಇದರಿಂದ ಆ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 1 ಲಕ್ಷ ರು. ದಂಡ ವಿಧಿಸಿದ್ದು, ದೂರುದಾರರಿಗೆ ಉಂಟಾದ ಅನಾನುಕೂಲತೆ ಮತ್ತು ಮಾನಸಿಕ ಯಾತನೆಗಾಗಿ 20 ಸಾವಿರ ರು. ಹಾಗೂ ಕಾನೂನು ವೆಚ್ಚ ಭರಿಸಲು 8 ಸಾವಿರ ರು.ಗಳನ್ನು ನೀಡಿತು.
ಇಂದಿನ ವೇಗದ ಜಗತ್ತಿನಲ್ಲಿ ಸಮಯ ಅತ್ಯಂತ ಅಮೂಲ್ಯವಾದುದು. ಗ್ರಾಹಕರ ಸಮಯ ಮತ್ತು ಹಣದಿಂದ ಅನ್ಯಾಯವಾಗಿ ಲಾಭ ಪಡೆಯುವ ಹಕ್ಕು ಯಾವುದೇ ವ್ಯವಹಾರಕ್ಕೆ ಇಲ್ಲ ಎಂದು ನ್ಯಾಯಾಲಯ ಎತ್ತಿಹಿಡಿಯಿತು. ಜಾಹೀರಾತು ವೀಕ್ಷಣೆಗೆ 25ರಿಂದ 30 ನಿಮಿಷ ಕಳೆಯುವುದು ವ್ಯರ್ಥ. ಬಿಡುವಿಲ್ಲದ ವೇಳಾಪಟ್ಟಿ ಹೊಂದಿರುವವರು, ವಿಶ್ರಾಂತಿಗಾಗಿ ಮನರಂಜನೆ ಬಯಸುತ್ತಾರೆ. ಅದರರ್ಥ ಅವರಿಗೆ ಬೇರೆ ಜವಾಬ್ದಾರಿಗಳಿಲ್ಲ ಎಂದಲ್ಲ ಎಂದು ಅಭಿಪ್ರಾಯಪಟ್ಟಿತು.

ಜಾಹೀರಾತು ಪ್ರದರ್ಶನ ಮಾಡುವುದು ಸರಕಾರಿ ನಿಯಮಗಳ ವ್ಯಾಪ್ತಿಯಲ್ಲೇ ಬರುತ್ತದೆ. ಅದರಲ್ಲೂ ಕೆಲವು ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಪ್ರದರ್ಶನ ಮಾಡಲಾಗಿದೆ ಎಂದು PVR inox ವಾದಿಸಿತ್ತು. ಆದರೆ, ಅದನ್ನು ತಿರಸ್ಕರಿಸಿದ ನ್ಯಾಯಾಲಯ ಇಂತಹ ಪ್ರದರ್ಶನ ಗರಿಷ್ಠ 10 ನಿಮಿಷಗಳನ್ನು ಮೀರಬಾರದು ಎಂದು ಅಭಿಪ್ರಾಯಪಟ್ಟಿತು.
ಜತೆಗೆ, ದೂರುದಾರರು ಅಷ್ಟು ಸಮಯ ಪ್ರದರ್ಶನವಾದ ಜಾಹೀರಾತು ರೆಕಾರ್ಡ್ ಮಾಡಿದ್ದು ತಪ್ಪು ಎಂದು ಐನಾಕ್ಸ್ ವಾದಿಸಿತ್ತು. ಇದು ಫೈರಸಿ ವಿರೋಧಿ ಕಾನೂನು ಉಲ್ಲಂಘಿಸಿದAತೆ ಎಂದು ವಾದಿಸಿತ್ತು. ನ್ಯಾಯಾಲಯ ಇದನ್ನು ಅಲ್ಲಗಳೆದಿದ್ದು, ರೆಕಾರ್ಡ್ ಮಾಡಿದ್ದು ಸಿನಿಮಾವನ್ನಲ್ಲ, ಬದಲಾಗಿ ಜಾಹೀರಾತು ಪ್ರದರ್ಶನ ಪ್ರೇಕ್ಷಕರ ಮೇಲೆ ಬೀರುವ ಪರಿಣಾಮ ವಿವರಿಸಲು ರೆಕಾರ್ಡ್ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿತು.


