ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೇ ಹನಿಟ್ರ್ಯಾಪ್ ಹಾಲಾಹಲ ಶುರುವಾಗಿದ್ದು, ರಾಜಕೀಯ ವಲಯದಲ್ಲಿ ಕೋಲಾಹಲ ಶುರುವಾಗಿದೆ.
ರಾಜ್ಯ ಸರಕಾರದ ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಈ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಆ ಪ್ರಭಾವಿ ಸಚಿವರು ಯಾರು ಎಂಬುದು ಇದೀಗ ಚರ್ಚೆಯ ವಿಷಯವಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಮಾತನಾಡಿ, ಹನಿಟ್ರ್ಯಾಪ್ ನಡೆದಿರುವ ಬಗ್ಗೆ ನಮಗೂ ಮಾಹಿತಿ ಬಂದಿದೆ. ಆದರೆ, ಯಾವ ಸಚಿವರು ಎಂಬ ಬಗ್ಗೆ ಮಾಹಿತಿಯಿಲ್ಲ. ಹನಿಟ್ರ್ಯಾಪ್ ದೊಡ್ಡ ಷಡ್ಯಂತ್ರವಾಗಿದ್ದು, ಆ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ್ದರು.
ಕೆ.ಜೆ. ಜಾರ್ಜ್ ಮಾತನಾಡಿ, ನನಗೆ ಹನಿಟ್ರ್ಯಾಪ್ ಅಂದ್ರೆ ಏನೂ ಅಂತ ಗೊತ್ತಿಲ್ಲ. ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವ ಪ್ರಶ್ನೆಯೂ ಇಲ್ಲ ಎಂದು ತಿಳಿಸಿದ್ದಾರೆ. ಸತೀಶ್ ಜಾರಕಿಹೊಳಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹನಿಟ್ರ್ಯಾಪ್ ಬಗ್ಗೆ ಕಿಡಿಕಾರಿದ್ದಾರೆ.
ಈ ಹಿಂದೆ ಹನಿಟ್ರ್ಯಾಪ್ ಪ್ರಕರಣದಲ್ಲಿಯೇ ರಮೇಶ್ ಜಾರಕಿಹೊಳಿ ಸಿಲುಕಿ ರಾಜೀನಾಮೆ ನೀಡಿದ್ದರು. ಇಂತಹ ಪರಿಸ್ಥಿತಿಯನ್ನು ಸೃಷ್ಟಿಸುವ ಸಲುವಾಗಿಯೇ ಹನಿಟ್ರ್ಯಾಪ್ ನಂತಹ ಪ್ರಯತ್ನಗಳು ನಡೆಯುತ್ತವೆ. ಇದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಾರ್ವಜನಿಕ ಜೀವನದಲ್ಲಿರುವವರಿಗೆ ಕಷ್ಟವಾಗಲಿದೆ ಎಂಬ ಒತ್ತಾಯ ಕೇಳಿ ಬಂದಿದೆ.