ಬೆಂಗಳೂರನ್ನ ದೇವ್ರು ಕೂಡ ಕಾಪಾಡಕ್ಕಾಗಲ್ಲ: ವಿವಾದ ಹುಟ್ಟಿಸಿದ ಡಿಸಿಎಂ ಹೇಳಿಕೆ
ಬೆಂಗಳೂರು: ಬೆಂಗಳೂರು ನಗರವನ್ನ ದೇವ್ರು ಕೂಡ ಕಾಪಾಡೋಕ್ ಆಗಲ್ಲ, ಅಷ್ಟೊಂದು ಟ್ರಾಫಿಕ್ ಆದ್ರೆ ದೇವ್ರು ಏನೂ ಮಾಡೋಕಾಗೊಲ್ಲ ಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಬೆಂಗಳೂರು ನಗರ ಉಸ್ತುವಾರಿಯೂ ಆಗಿರುವ ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಇದೀಗ ಪ್ರತಿಪಕ್ಷಗಳ ಪಾಲಿಗೆ ಅಕ್ಷಯ ಪಾತ್ರೆಯಾಗಿದೆ. ವಿಪಕ್ಷ ನಾಯಕರು ಕನಕಪುರದ ಬಂಡೆಯ ಮೇಲೆ ಬ್ರಾಂಡ್ ಬೆಂಗಳೂರಿನ ಡೈನಾಮೇಟ್ ಎಸೆಯುತ್ತಿದ್ದಾರೆ.
ನಗರದಲಿ ದಿನೇದಿನೇ ಟ್ರಾಫಿಕ್ ಸಮಸ್ಯೆ ಎದುರಾಗುವುದು ಸಹಜವಾದ ಪ್ರಕ್ರಿಯೆ. ಇದನ್ನು ನಿಭಾಯಿಸುವುದು ಮತ್ತು ಅದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವುದು ಆಳುವ ಸರಕಾರಗಳ ಕರ್ತವ್ಯ. ಆದರೆ, ಡಿಸಿಎಂ, ನಗರ ಉಸ್ತುವಾರಿ ಸಚಿವರು ಇಂತಹ ಹೇಳಿಕೆ ನೀಡುವುದು ಎಷ್ಟು ಸರಿ?
ಡಿಸಿಎಂ ನೀಡಿದ ಈ ಹೇಳಿಕೆಯನ್ನು ಬಿಜೆಪಿ ನಾಯಕರು ಅಸ್ತçವಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷ ನಾಯಕ ಆರ್.ಅಶೋಕ್, ಡಿಸಿಎಂ ಕೈಲಿ ಬೆಂಗಳೂರಿನ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಅವರು ಆ ಸ್ಥಾನದಿಂದ ಕೆಳಗಿಳಿಯುವ ತನಕ ಬೆಂಗಳೂರು ಅಭಿವೃದ್ಧಿ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಡಾ. ಅಶ್ವತ್ಥ ನಾರಾಯಣ ಅವರು ಮಾತನಾಡಿ, ಡಿಕೆ ಶಿವಕುಮಾರ್ ಬೆಂಗಳೂರಿನ ಉಸ್ತುವಾರಿಯಾಗಿರುವ ತನಕ ಬೆಂಗಳೂರು ಉದ್ಧಾರವಾಗದು. ಏಕೆಂದರೆ, ಅವರು ರಸ್ತೆ ಗುಂಡಿ ಮುಚ್ಚುವ ಬದಲು ಲೂಟಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಹೀಗಾದರೆ, ನಗರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಮಾಜಿ ಸಚಿವ ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಟಿ.ರವಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಡಿಕೆಶಿ ಹೇಳಿಕೆಯನ್ನು ಖಂಡಿಸಿದ್ದಾರೆ. ಬೆಂಗಳೂರಿನ ಸ್ಥಿತಿ ಮತ್ತು ಡಿಕೆಶಿ ಹೇಳಿಕೆಯ ಬಗ್ಗೆ ಮೋಹನ್ ದಾಸ್ ಪೈ ಆಕ್ಷೇಪ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.


