ಹೈದರಾಬಾದ್: ಶಾರ್ಟ್ ಸರ್ಕೀಟ್‌ನಿಂದಾಗಿ ಬೆಳಿಗ್ಗೆ ಸುಮಾರು 6.15ಕ್ಕೆ ಹೊತ್ತಿಕೊಂಡ ಬೆಂಕಿಯು ಒಂದೇ ಕುಟುಂಬದ 17 ಮಂದಿಯನ್ನು ಮಲಗಿದ್ದಲ್ಲಿಯೇ ಬಲಿ ತೆಗೆದುಕೊಂಡಿದೆ. ಐತಿಹಾಸಿಕ ಮಹತ್ವದ ಚಾರ್‌ಮಿನಾರ್‌ಗೆ 200 ಮೀ ದೂರದಲ್ಲಿ ಭಾನುವಾರ ಈ ದುರಂತ ನಡೆದಿದೆ. ಈ ಅಗ್ನಿ ಅವಘಡದಲ್ಲಿ 8 ಮಕ್ಕಳೂಮೃತಪಟ್ಟಿದ್ದಾರೆ.
ಅವರಲ್ಲಿ ಒಂದೂವರೆ ವರ್ಷದ ಹಸುಳೆಯೂ ಸೇರಿದೆ.
ಮೃತ ಪ್ರಲ್ಹಾದ್ ಅಗರ್ವಾಲ್ ಅವರಿಗೆ ಸೇರಿದ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಕುಟುಂಬವು ಸುಮಾರು 125 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿತ್ತು. ಪ್ರಲ್ಹಾದ್ ಅವರು ತಲತಲಾಂತರಗಳಿಂದ ಆಭರಣ ವ್ಯಾಪಾರ ಮಾಡುತ್ತಿದ್ದಾರೆ. ನೆಲ ಮಳಿಗೆಯಲ್ಲಿ ‘ಕೃಷ್ಣ ಪರ್ಲ್ಸ್’ ಆಭರಣ ಅಂಗಡಿ, ಮೇಲೆರಡು ಅಂತಸ್ತಿನಲ್ಲಿ ವಾಸದ ಮನೆಗಳಿದ್ದವು.
ಆಭರಣ ಮಳಿಗೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಮಳಿಗೆಯ ಹವಾನಿಯಂತ್ರಿತ ಯಂತ್ರವೊಂದು ಸ್ಫೋಟಗೊಂಡಿತು. ಈ ಬಳಿಕ ಬೆಂಕಿಯು ತೀವ್ರವಾಗಿ ಹಬ್ಬಿದೆ. ಮಳಿಗೆಯ ಮೊದಲ ಮಹಡಿಯಲ್ಲಿ 17 ಮಂದಿ ನಿದ್ದೆಯಲ್ಲಿದ್ದರು. ಎರಡನೇ ಅಂತಸ್ತಿನಲ್ಲಿ 4 ಮಂದಿ ಮಲಗಿದ್ದರು. ಬೇಸಿಗೆ ರಜೆಯ ಕಾರಣ ಕುಟುಂಬದ ಹಲವು ಮಂದಿ ಪ್ರಲ್ಹಾದ್ ಅವರ ಮನೆಗೆ ಬಂದಿದ್ದರು.
‘ತೀವ್ರ ಬೆಂಕಿ ಹೊತ್ತಿಕೊಂಡಿದ್ದ ರಿಂದ ದಟ್ಟ ಹೊಗೆಯಿಂದಾಗಿ ಮೊದಲ ಅಂತಸ್ತಿನಲ್ಲಿ ಮಲಗಿದ್ದವರಿಗೆ ಉಸಿರುಗಟ್ಟಿದೆ. ಮೃತರಲ್ಲಿ ಸುಟ್ಟ ಗಾಯಗಳು ಇರಲಿಲ್ಲ. ಅರೆಪ್ರಜ್ಞಾವಸ್ತೆಯಲ್ಲಿದ್ದ ಹಲವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಎಲ್ಲರೂ ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದರು’ ಎಂದು ತೆಲಂಗಾಣ ವಿಪತ್ತು ನಿರ್ವಹಣೆ ಮತ್ತು ಅಗ್ನಿ ಶಾಮಕ ಸೇವೆಗಳ ಮಹಾನಿರ್ದೇಶಕ ವೈ. ನಾಗಿ ರೆಡ್ಡಿ ವಿವರಿಸಿದರು.
ಭಾರಿ ಹೊಗೆ: ‘6.17ರ ಸುಮಾರಿಗೆ ಅವಘಡ ಕುರಿತು ಅಗ್ನಿ ಶಾಮಕ ಇಲಾಖೆಗೆ ಕರೆ ಬಂದಿತು. ಸಿಬ್ಬಂದಿಯು ಸುಮಾರು 6.20ಕ್ಕೆ ಸ್ಥಳಕ್ಕೆ ಧಾವಿಸಿದರು. ಬೆಂಕಿಯು ಪಕ್ಕದ ಕಟ್ಟಡಗಳಿಗೆ ಹರಡುವುದನ್ನು ತಡೆಯುವುದು ನಮ್ಮ ಮುಂದಿದ್ದ ಸವಾಲಾಗಿತ್ತು. ಎರಡು ತಾಸಿನ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಭತ್ತಿ ವಿಕ್ರಮಾರ್ಕ ಮಲ್ಲು ಹೇಳಿದರು.
ಘಟನೆ ಕುರಿತು ಪ್ರತಿಕ್ರಿಯಿಸಿದರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ಕೂಡ ಪರಿಹಾರ ಘೋಷಿಸಿದ್ದು, ಮೃತರ ಕುಟುಂಬಕ್ಕೆ ₹5 ಲಕ್ಷ ನೀಡುವುದಾಗಿ ಹೇಳಿದೆ.ಪರಿಹಾರ ಘೋಷಣೆ