ಬೆಂಗಳೂರು: ಕರ್ನಾಟಕದ ಬಹುಪಾಲು ಶಾಸಕರು ಕೋಟ್ಯಾಧೀಶರಾಗಿದ್ದು, 31 ಶತಕೋಟ್ಯಾಧಿಪತಿ ಶಾಸಕರನ್ನು ಹೊಂದುವ ಮೂಲಕ ದೇಶದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಪ್ರಕಾರ ಕೋಟ್ಯಾಧಿಪತಿ ಶಾಸಕರ ಪಟ್ಟಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಕರ್ನಾಟಕದ 31 ಶಾಸಕರು ಶತಕೋಟ್ಯಾಧೀಶರಾಗಿದ್ದು, ಆಂಧ್ರಪ್ರದೇಶ 27 ಶಾಸಕರು ಶತಕೋಟ್ಯಾಧೀಶರಾಗಿದ್ದಾರೆ. 18 ಶತಕೋಟ್ಯಾಧೀಶ ಶಾಸಕರನ್ನು ಮಹಾರಾಷ್ಟ್ರ ಹೊಂದಿದೆ.
ಒಟ್ಟು ಘೋಷಿತ ಜನಪ್ರತಿನಿಧಿಗಳ ಆಸ್ತಿ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 14,179 ಕೋಟಿ ಘೋಷಿತ ಆಸ್ತಿಯನ್ನು ಕರ್ನಾಟಕದ ಶಾಸಕರು ಹೊಂದಿದ್ದಾರೆ. ಚುನಾವಣೆಗೆ ಮುಂಚೆ ಸಲ್ಲಿಸಲಾದ ಸ್ವಯಂ ಘೋಷಿತ ಆಸ್ತಿ ವಿವರದ ಆಧಾರದಲ್ಲಿಯೇ ವರದಿ ತಯಾರಿಸಲಾಗಿದೆ. ಈ ವರದಿ ಪ್ರಕಾರ ಭಾರತದ ಟಾಪ್ 10 ಶ್ರೀಮಂತ ಶಾಸಕರ ಪೈಕಿ ಕರ್ನಾಟಕದ ನಾಲ್ವರು ಸ್ಥಾನ ಪಡೆದುಕೊಂಡಿದ್ದಾರೆ.
ಇಡೀ ದೇಶದಲ್ಲಿ 119 ಜನ ಶತಕೋಟ್ಯಾಧೀಶ ಶಾಸಕರಿದ್ದಾರೆ. ಅದರಲ್ಲಿ 76 ಶಾಸಕರು ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೇ ಬಂದಿದ್ದಾರೆ. ಮುಂಬೈನ ಘಾಟ್ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ದೇಶದ ಅತ್ಯಂತ ಶ್ರೀಮಂತ ಶಾಸಕರಾಗಿದ್ದು, ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ಎರಡನೇ ಶ್ರೀಮಂತ ಶಾಸಕರಾಗಿದ್ದಾರೆ.
ಪರಾಗ್ ಶಾ 3,400 ಕೋಟಿ ರು. ಆಸ್ತಿಯ ಒಡೆಯರಾಗಿದ್ದು, ಡಿ.ಕೆ.ಶಿವಕುಮಾರ್ ಆಸ್ತಿಯ ಮೌಲ್ಯ ಅಧಿಕೃತವಾಗಿ 1,413 ಕೋಟಿ ರು.,ಗಳಾಗಿದೆ. ರಾಜ್ಯದ ಮತ್ತೊಬ್ಬ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ 1,267 ಕೋಟಿ ಆಸ್ತಿಯೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ 1,156 ಕೋಟಿ ಆಸ್ತಿಯೊಂದಿಗೆ ರಾಜ್ಯದ 3 ನೇ ಶ್ರೀಮಂತ ಶಾಸಕರಾಗಿದ್ದಾರೆ.