ಸರಕಾರಿ ಶಾಲೆಗಳನ್ನು ದಾನಿಗಳು ಕೈಜೋಡಿಸಿ ಬೆಳೆಸಬೇಕು: ಖ್ಯಾತ ವೈದ್ಯ ಡಾ. ಆಂಜಿನಪ್ಪ ಕರೆ
ಹೊಸಕೋಟೆ : ಗ್ರಾಮೀಣ ಸರಕಾರಿ ಶಾಲೆಗಳ ಬಲವರ್ಧನೆಗೆ ದಾನಿಗಳು, ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹ ದೇಶದ ಅಭಿವೃದ್ಧಿಗೆ ನಾಂದಿ ಎಂಬುದನ್ನು ಪ್ರತಿಯೊಬ್ಬರು ಅರಿತು ಕೊಳ್ಳಬೇಕು ಎಂದು ಕೆಂಪೇಗೌಡ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಆಂಜಿನಪ್ಪ ಹೇಳಿದರು.
ಸೂಲಿಬೆಲೆ ಸರಕಾರಿ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹಮ್ಮಿಕೊಂಡಿದ್ದ ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಎಂ.ಆರ್. ಉಮೇಶ್ ಮಾತನಾಡಿ, ಕಳೆದ ಸುಮಾರು 15 ವರ್ಷಗಳಿಂದ ಪ್ರತಿ ವರ್ಷ ಸರಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾಗಿರುವ ಲೇಖನಿ ಸಾಮಗ್ರಿಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಗ್ರಾಮೀಣ ಮಕ್ಕಳಿಗಾಗಿ ಅನೇಕ ದಾನಿಗಳು ಕೈ ಜೋಡಿಸಿದ್ದಾರೆ. ಮಕ್ಕಳು ಈ ಸೌಲಭ್ಯಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡು ಶಿಕ್ಷಣದಲ್ಲಿ ಪ್ರಗತಿ ಕಾಣಬೇಕು ಎಂದರು.
ಸೂಲಿಬೆಲೆ ಗ್ರಾಪಂ ಅಧ್ಯಕ್ಷ ಎ ಜನಾರ್ದನರೆಡ್ಡಿ, ಪಿಡಿಒ ಮಂಜುನಾಥ್, ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಶ್, ರೆವಿನ್ಯೂ ಇನ್ಸ್‌ಪೆಕ್ಟರ್ ನ್ಯಾನಮೂರ್ತಿ, ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣಪ್ಪ, ಜೇನುಗೂಡು ಟ್ರಸ್ಟ್‌ನಿರ್ದೇಶಕ ಸೈಯದ್ ಮಹಬೂಬ್, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಸ್ಟುಡಿಯೊ ಆನಂದ್, ಬೆಟ್ಟಹಳ್ಳಿ ಆಂಜಿನಪ್ಪ, ರಾಜೇಶ್ವರಿ, ಪ್ರಭಾವತಿ, ಧರ್ಮಸ್ಥಳ ಸಂಘದ ಮೇಲ್ವಿಚಾರಕ ಚಂದನ್‌ಗೌಡ, ಮುಖ್ಯ ಶಿಕ್ಷಕಿ ಸೌಮ್ಯ, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.


