ಹಗಲಿರುಳು ಕಾರ್ಯನಿರ್ವಹಿಸುವ ಕಂಪನಿಗೆ ಯಾವ ಅನುಮತಿಯೂ ಇಲ್ಲ
ಗುಂಡಾಗಿರಿ ಮೂಲಕವೇ ವರ್ಷಾನುಗಟ್ಟಲೇ ಓಡುತ್ತಿದೆ ಬೃಹತ್ ಬಾಯ್ಲರ್ ಘಟಕ
ಬೆಂಗಳೂರು: ನಗರದ ಪ್ರತಿಷ್ಠಿತ ಚಾಮರಾಜಪೇಟೆ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಕಂಪನಿಯೊಂದು ದಿನನಿತ್ಯ ಜನಸಾಮಾನ್ಯರಿಗೆ ತಲೆನೋವಿನ ಸಂಗತಿಯಾಗಿದೆ.
‘ವಿಜಯಲಕ್ಷ್ಮಿ ಕಮರ್ಷಿಯಲ್ ಕಿಚನ್ ಎಕ್ಯೂಪ್ಮೆಂಟ್ಸ್’ ಎಂಬ ಸಂಸ್ಥೆ ಚಾಮರಾಜಪೇಟೆಯ ಜನವಸತಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಈ ಫ್ಯಾಕ್ಟರಿ, ಸುತ್ತಮುತ್ತಲಿನ ಜನರ ನೆಮ್ಮದಿ ಕೆಡಿಸಿದೆ. ಇಷ್ಟೆಲ್ಲ ಆದರೂ, ಫ್ಯಾಕ್ಟರಿಗೆ ಯಾವುದೇ ಪ್ರಾಧಿಕಾರದ ಅನುಮತಿ ಇಲ್ಲ ಎಂಬುದು ಕುತೂಹಲದ ಸಂಗತಿ.
ವಿಜಯಲಕ್ಷ್ಮಿ ಕಮರ್ಷಿಯಲ್ ಕಿಚನ್ ಎಕ್ಯೂಪ್ಮೆಂಟ್ಸ್ ಕಂಪನಿ ಯಾವುದೇ ಪ್ರಾಧಿಕಾರದಲ್ಲಿ ನೋಂದಣಿಯಾಗಿಲ್ಲ. ಬಿಬಿಎಂಪಿ ವತಿಯಿಂದ ಯಾವುದೇ ಅನುಮತಿ ಪಡೆದಿಲ್ಲ, ಮಾಲಿನ್ಯ ನಿಯಂತ್ರಣ ಮಂಡಳಿ ಎನ್ಒಸಿ ಪಡೆದಿಲ್ಲ. ಯಾವುದೇ ಅಧಿಕೃತ ಮಾನ್ಯತೆಯಿಲ್ಲದಿದ್ದರೂ ಕಂಪನಿ ಹಲವಾರು ವರ್ಷಗಳಿಂದ ಜನವಸತಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.
ಪ್ರಶ್ನೆ ಮಾಡಿದರೆ ದಬ್ಬಾಳಿಕೆ: ಈ ಬಗ್ಗೆ ಪ್ರಶ್ನೆ ಮಾಡಿದರೆ, ಸ್ಥಳೀಯರನ್ನು ಹೆದರಿಸುವ ಪ್ರಯತ್ನ ನಡೆಯುತ್ತದೆ. ಪ್ರಶ್ನಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ, ಠಾಣೆಗೆ, ಕೋರ್ಟ್ ಗೆ ಅಲೆಸುವ ಕೆಲಸ ಮಾಡುತ್ತಾರೆ. ಈ ಬಗ್ಗೆ ತಕರಾರು ತೆಗೆಯುವವರನ್ನು ಬೇರೆ ಬೇರೆ ಪ್ರಯತ್ನದ ಮೂಲಕ ಬಾಯಿಮುಚ್ಚಿಸುವ ಕೆಲಸ ನಡೆಯುತ್ತದೆ ಎಂಬ ಆರೋಪ ಕೇಳಿಬಂದಿದೆ.
ಫ್ಯಾಕ್ಟರಿ ಕಾರ್ಯಚಟುವಟಿಕೆಯಿಂದ ಸುತ್ತಲಿನ ನಿವಾಸಿಗಳು, ವಯೋವೃದ್ಧರು, ಶಿಕ್ಷಣದಲ್ಲಿ ನಿರತವಾಗಿರುವ ಮಕ್ಕಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಅನೇಕ ಸಲ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ದೂರಾಗಿದೆ.
- ದಿನಾಂಕ 27-2-2024 ರಲ್ಲಿ ಬಿಬಿಎಂಪಿಯಿಂದ ಫ್ಯಾಕ್ಟರಿ ಗೆ ಸಂಬಂಧಿಸಿ ಯಾವುದೇ ಅನುಮತಿ ಇಲ್ಲ ಎಂದು ಪತ್ರ
ಮಾಲಿನ್ಯ ನಿಯಂತ್ರಣ ಮಂಡಳಿ 4-11-2023 ರಲ್ಲಿ ಯಾವುದೇ ಅನುಮತಿ ಇಲ್ಲದಿರುವುದಕ್ಕೆ ಪತ್ರ ಬರೆದಿದೆ.
5-3-2024 ರಂದು ಬಿಬಿಎಂಪಿ ಆರೋಗ್ಯಾಧಿಕಾರಿ ಬೆಸ್ಕಾಂಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಶಿಫಾರಸತೆಗೆದುಕೊಂಡಿಲ್ಲ
11-3-2024 ರಂದು ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ನೊಟೀಸ್ ನೀಡಿದೆ.
ಬೆಸ್ಕಾಂನಿಂದ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ
ಯಾವುದೇ ಪ್ರಾಧಿಕಾರಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಫ್ಯಾಕ್ಟರಿ ಮಾಲೀಕರು ಖಾಲಿ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಈ ಕುರಿತು ಗಮನಹರಿಸಿ, ಫ್ಯಾಕ್ಟರಿ ತೆರವು ಮಾಡಬೇಕು.
- ಗುರುಮೂರ್ತಿ, ಕರ್ನಾಟಕ ರಾಷ್ಟ್ರ ಸಮಿತಿ