ಮುಡಾ ಅಸ್ತ್ರಕ್ಕೆ ಕರೊನಾಸ್ತ್ರ: ಕ್ರಿಮಿನಲ್ ಕೇಸ್ ದಾಖಲಿಸಲು ಶಿಫಾರಸು!
ಬೆಂಗಳೂರು: ಮುಡಾ ಪ್ರಕರಣ ಸಿಎಂ ಸಿದ್ದರಾಮಯ್ಯರನ್ನ ನಿದ್ದೆಗೆಡಿಸಿದೆ. ಮುಡಾ ಕೇಸ್ ಬಗ್ಗೆ ಸದ್ಯ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ವಿರುದ್ಧ ಒಂದು ಕಡೆ ಕಾನೂನು ಸಮರ ನಡೆಯುತ್ತಿದ್ದರೆ, ಅತ್ತ ಬಿಜೆಪಿ ಅವಧಿ ಹಗರಣ ಕುರಿತು ಸಿಎಂ ಸಿದ್ದರಾಮಯ್ಯ ರಾಜಕೀಯ ಹೋರಾಟ ಮುಂದುವರಿಸಿದ್ದಾರೆ.
ರಾಜ್ಯ ಬಿಜೆಪಿ ಹೂಡಿರುವ ಮುಡಾಸ್ತ್ರಕ್ಕೆ ಕಾಂಗ್ರೆಸ್ ಕೊರೊನಾಸ್ತ್ರ ಹೂಡಿದೆ. ಜಸ್ಟೀಸ್ ಜಾನ್ ಮೈಕೆಲ್ ಕುನ್ಹಾ ನೇತೃತ್ವದ ಆಯೋಗ, ಬಿಜೆಪಿ ಸರ್ಕಾರದಲ್ಲಿ ಕೊರೊನಾ ಹಗರಣದ ವರದಿಯನ್ನು ನಿನ್ನೆ(ಆಗಸ್ಟ್ 31) ಸಿಎಂಗೆ ಸಲ್ಲಿಸಿದೆ. ಒಟ್ಟು 1,722 ಪುಟಗಳ ಕೊರೊನಾ ಹಗರಣದ ರಿಪೋರ್ಟ್ ನೀಡಿದ್ದು, ವರದಿಯಲ್ಲಿ ಕಂಡುಬಂದ ಅಂಶಗಳು ಈ ಕೆಳಗಿನಂತಿವೆ ನೋಡಿ.
ಕ್ರಿಮಿನಲ್ ಕೇಸ್ ದಾಖಲಿಸುವಂತೆ ಶಿಫಾರಸು…!
ಕೊವಿಡ್ ಅವಧಿಯಲ್ಲಿನ ಹಣದ ಖರ್ಚು-ವೆಚ್ಚದ ಸಂಪೂರ್ಣ ವರದಿ ಸಿಎಂ ಸಿದ್ದರಾಮಯ್ಯ ಕೈ ಸೇರಿದೆ. ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾ ನೇತೃತ್ವದಲ್ಲಿ ಸಿಎಂ ಕಾವೇರಿ ನಿವಾಸದಲ್ಲಿ ವರದಿ ಸಲ್ಲಿಸಲಾಗಿದೆ. ಬೃಹತ್ ಗಾತ್ರದ ಬಾಕ್ಸ್ ನಲ್ಲಿ ಒಟ್ಟು 1,722 ಪುಟಗಳ ಮಧ್ಯಂತರ ವರದಿಯನ್ನ ಸಲ್ಲಿಕೆ ಮಾಡಲಾಗಿದೆ. ಆಯೋಗವು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಿದೆ. ಮಧ್ಯಂತರ ವರದಿಯಲ್ಲಿ ಭ್ರಷ್ಟಾಚಾರ ನಡೆದಿರುವುದರ ಬಗ್ಗೆ ಉಲ್ಲೇಖಿಸಲಾಗಿದೆ. ಕೋಟ್ಯಂತರ ರೂ. ಹಣವನ್ನ ದುರುಪಯೋಗಪಡಿಸಿಕೊಳ್ಳಲಾಗಿದೆ.
ಕೆಲಸ ಮಾಡದೆಯೇ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಉಲ್ಲೇಖ ಮಾಡಲಾಗಿದೆ. ಕ್ಷೇತ್ರಾವಾರು ಎಷ್ಟೆಷ್ಟು ಹಣ ಖರ್ಚು ಮಾಡಲಾಗಿದೆ ಎಂದು ತೋರಿಸಿದರೂ ಕೆಲಸವೇ ಆಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಅಕ್ರಮ ಎಸಗಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ವರದಿಯಲ್ಲಿ ಕಂಡುಬಂದ ಅಂಶಗಳೇನು..?
1,754 ಕೋಟಿ ರೂಪಾಯಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಾಗಿಲ್ಲ.
ಕೊವಿಡ್ ಅವಧಿಯಲ್ಲಿ ಭಾರಿ ಮೊತ್ತದ ಹಣ ಸೂಕ್ತ ರೀತಿಯಲ್ಲಿ ನಿರ್ವಹಣೆ ಆಗಿಲ್ಲ.
ಹಣ ಖರ್ಚು-ವೆಚ್ಚ ಮಾಡಿರುವ ಬಗ್ಗೆ ಸೂಕ್ತ ದಾಖಲೆ, ಮಾಹಿತಿಯಿಲ್ಲ.
ಕೆಲ ಖರೀದಿ ಹಾಗೂ ನಿರ್ವಹಣೆಯಲ್ಲಿ ಹಣ ವಿನಿಯೋಗಿಸದೆ ಬಿಲ್ ಸೃಷ್ಟಿ ಮಾಡಲಾಗಿದೆ ಎಂದು ವರದಿ.
ಹಣ ದುರುಪಯೋಗದ ಸಂಶಯದಲ್ಲಿ ಕ್ರಿಮಿಕಲ್ ಕೇಸ್ ದಾಖಲಿಸಿ ತನಿಖೆಗೆ ಶಿಫಾರಸ್ಸು
ನ್ಯಾಷನಲ್ ಹೆಲ್ತ್ ಮಿಷನ್, ಮೆಡಿಕಲ್ ಎಜುಕೇಷನ್ ನಿರ್ದೇಶನಾಲಯ, ಬಿಬಿಎಂಪಿ ಕರ್ನಾಟಕ ಮೆಡಿಕಲ್ ಕಾರ್ಪೊರೇಷನ್ ಸೇರಿದಂತೆ ಒಟ್ಟು 11 ವಿಭಾಗದಲ್ಲಿ ಹಣ ದುರುಪಯೋಗದ ಬಗ್ಗೆ ಉಲ್ಲೇಖ.
2023ರ ಆಗಸ್ಟ್ 25ರಂದು ರಚನೆಯಾಗಿದ್ದ ಕೋವಿಡ್ ತನಿಖಾ ಆಯೋಗ ರಚನೆ ಮಾಡಲಾಗಿತ್ತು. ಸರ್ಕಾರದಿಂದ ಬಿಡುಗಡೆಯಾದ ಹಣವನ್ನ ಯಾವ ಯಾವ ವಿಭಾಗಗಳು ಎಷ್ಟು ಖರ್ಚು ಮಾಡಿಕೊಂಡಿದೆ.
11 ವಿಭಾಗಗಳಿಂದ ಖರ್ಚಾದ ಒಟ್ಟು ಮೊತ್ತದ ವಿವರ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 1,754 ಕೋಟಿ ರೂ.
ರಾಷ್ಟ್ರೀಯ ಆರೋಗ್ಯ ಅಭಿಯಾನ 1,406 ಕೋಟಿ ರೂ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ 918 ಕೋಟಿ ರೂ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ 1,394 ಕೋಟಿ ರೂ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ 569 ಕೋಟಿ ರೂ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ 264 ಕೋಟಿ ರೂ.
ಬಿಬಿಎಂಪಿ ಕೇಂದ್ರ ಕಚೇರಿ 732 ಕೋಟಿ ರೂ.
ಬಿಬಿಎಂಪಿ ದಾಸರಹಳ್ಳಿ ವಲಯ 26 ಕೋಟಿ ರೂ.
ಬಿಬಿಎಂಪಿ ಪೂರ್ವ ವಲಯ 78 ಕೋಟಿ ರೂ.
ಬಿಬಿಎಂಪಿ ಮಹದೇವಪುರ ವಲಯ 48 ಕೋಟಿ ರೂ.
ಬಿಬಿಎಂಪಿ ರಾಜರಾಜೇಶ್ವರಿ ವಲಯದಿಂದ 31 ಕೋಟಿ ರೂ.
ರಾಜ್ಯ ಬಿಜೆಪಿಯಲ್ಲಿ ಕಸಿವಿಸಿ!
ಕೋವಿಡ್ ಹಗರಣದ ಬಗ್ಗೆ ವರದಿ ಸರ್ಕಾರ ಕೈಸೇರಿದ ಬೆನ್ನಲ್ಲೇ ಬಿಜೆಪಿಗರಲ್ಲಿ ಢವಢವ ಶುರುವಾಗಿದೆ. ಕಳೆದ ರಾತ್ರಿ ಸಿಎಂ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ.ಪಾಟೀಲ್, ಡಾ.ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಸಚಿವರು ಸಮಾಲೋಚನೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಗುರುವಾರ ಸಚಿವ ಸಂಪುಟ ಸಭೆ ಕರೆದಿದ್ದಾರೆ.
ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ವರದಿ ಬಹಿರಂಗಗೊಳಿಸುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಆರೋಗ್ಯ ಸಚಿವ, ಹಾಲಿ ಸಂಸದ ಡಿ.ಸುಧಾಕರ್ ಅವರಿಗೆ ಕೋವಿಡ್ ಹಗರಣದ ತನಿಖಾ ವರದಿ ಭಾರಿ ಭೀತಿ ಸೃಷ್ಟಿಸಿದೆ.
ಉಳಿದ ಬೆಂಗಳೂರಿನ 4 ವಲಯಗಳು ಹಾಗೂ 31 ಜಿಲ್ಲೆಗಳ ವರದಿ ಶೀಘ್ರವೇ ಸಲ್ಲಿಕೆ ಮಾಡುವುದಾಗಿ ತಿಳಿಸಲಾಗಿದೆ. ಒಟ್ಟಾರೆ, ಕೋವಿಡ್ ಹಗರಣದಿಂದ ರಾಜ್ಯದಲ್ಲಿ 1,700 ಕೋಟಿ ರೂ. ಅಧಿಕ ಹಣದ ದುರುಪಯೋಗವಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಸರ್ಕಾರ ಹೇಗೆ ತನಿಖೆ ನಡೆಸುತ್ತೆ ಎಂಬುದು ಇದೀಗ ಕುತೂಹಲ ಕೆರಳಿಸಿದೆ.


