ಮುಡಾ ಮಾಜಿ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಜಿ ಮುಡಾ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಮಾಜಿ ಮುಡಾ ಆಯುಕ್ತರಾದ ನಟೇಶ್ ಮತ್ತು ದಿನೇಶ್ ಕುಮಾರ್ ಅವರ ವಿರುದ್ಧ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಮಾಜಿ ಮುಡಾ ಆಯುಕ್ತರಾದ ನಟೇಶ್, ದಿನೇಶ್ ಕುಮಾರ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಅವರನ್ನು ಬಂಧಿಸಬೇಕು. ಈ ಸಂಬಂಧ ಭೂಸ್ವಾಧೀನ ಅಧಿಕಾರಿಗಳು, ಸರ್ಕಾರದ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ಅಧಿಕಾರಿಗಳಿಂದಲೇ ಹಣ ವಸೂಲಿ ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಏನಿದೆ?
ನಾನು (ಶಾಸಕ ಶ್ರೀವತ್ಸ್) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯನಾದ ನಂತರ ಪ್ರಾಧಿಕಾರದ ನಿವೇಶನಗಳನ್ನು ಕಾನೂನು ಬಾಹಿರವಾಗಿ ಹಾಗೂ ಅಕ್ರಮವಾಗಿ 50:50 ಅನುಪಾತದಲ್ಲಿ ಸರಿ ಸುಮಾರು 5 ಲಕ್ಷ ಚದರ ಅಡಿಗೂ ಹೆಚ್ಚಿನ ನಿವೇಶನಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿರುವುದು ಕಂಡುಬಂದ ಹಿನ್ನಲೆಯಲ್ಲಿ ಅಂತಹ ಆದೇಶಗಳನ್ನು ರದ್ದುಗೊಳಿಸಬೇಕು ಹಾಗೂ ಈ ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ, ಕೆಎಎಸ್ ಅಧಿಕಾರಿ ಜಿ.ಟಿ.ದಿನೇಶ್ ಕುಮಾರ್ ರವರ ವಿರುದ್ಧ ಮತ್ತು ಇಂತಹ ಪ್ರಕರಣಗಳಲ್ಲಿ ಭಾಗಿಯಾದಂತಹ ಇತರೆ ಅಧಿಕಾರಿ ವರ್ಗದವರ ಮೇಲೆ ಸೂಕ್ತ ತನಿಖೆ ನಡೆಸಿ ಸರಿಯಾದ ಶಿಸ್ತುಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಇವರಿಗೆ ಸೂಕ್ತ ದಾಖಲೆಗಳೊಂದಿಗೆ ಪತ್ರ ಬರೆದಿದ್ದರೂ ಸಹ ಈ ತನಕ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಇಂತಹ ಅಕ್ರಮಗಳಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 5,000 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿರುತ್ತದೆ. ಕಾನೂನು ಬಾಹಿರವಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವಂತಹ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಈ ಹಿಂದಿನ ಆಯುಕ್ತರುಗಳಾದ ನಟೇಶ್, ಕೆ.ಎ.ಎಸ್ ಮತ್ತು ಜಿ.ಟಿ. ದಿನೇಶ್ ಕುಮಾರ್, ಕೆ.ಎ.ಎಸ್ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ. ಆದ್ದರಿಂದ ಇವರ ವಿರುದ್ಧ ತನಿಖೆ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ.
ಈ ಕೂಡಲೇ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ ವರ್ಗದವರನ್ನು ಬಂಧಿಸಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಸದರಿ ಅಧಿಕಾರಿಗಳಿಂದಲೇ ಭರಿಸುವಂತೆ ಸೂಕ್ತ ಆದೇಶ ಹೊರಡಿಸಬೇಕೆಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸಾ ಮನವಿ ಮಾಡಿದ್ದಾರೆ.


