ಮೀಸಲು ಅರಣ್ಯದಲ್ಲಿ ಜೀಪ್ ರೇಸ್ : ಅಧಿಕಾರಿಗಳ ವಿರುದ್ಧ ಅರಣ್ಯ ಸಚಿವ ಈಶ್ವರ ಖಂಡ್ರೆ ಗರಂ
ಬೆಂಗಳೂರು: ಮೀಸಲು ಅರಣ್ಯ ಪ್ರದೇಶದಲ್ಲಿ ಜೀಪ್ ರೇಸ್ ಆಯೋಜನೆ ಮಾಡಿದ್ದ ಅಧಿಕಾರಿಗಳ ವಿರುದ್ಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಭೈರಾಪುರ ಹೊಸಕೆರೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ಜೀಪ್ ರೇಸ್ ಆಯೋಜನೆ ಮಾಡಿದ್ದರು. ಸುಮಾರು 80 ಕ್ಕೂ ಹೆಚ್ಚು ಜೀಪ್ ಗಳು ರೇಸ್ ನಲ್ಲಿ ಭಾಗವಹಿಸಿದ್ದವು. ಇದು ಸಚಿವ ಖಂಡ್ರೆ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿಗಳ ಮೇಲೆ ಗರಂ ಆಗಿದ್ದು ತನಿಖೆಗೆ ಆದೇಶ ಮಾಡಿದ್ದಾರೆ.
ಮೀಸಲು ಅರಣ್ಯ ಪ್ರದೇಶ ಇರುವುದು ಮೋಜು ಮಸ್ತಿ ಮಾಡುವುದಕ್ಕೆ ಅಲ್ಲ, ಅಲ್ಲಿರುವ ಪ್ರಾಣಿಗಳಿಗೆ ತೊಂದರೆ ಕೊಡುವ ಹಕ್ಕು ಯಾರಿಗೂ ಇಲ್ಲ, ಅರಣ್ಯ ಇಲಾಖೆಯ ಅಧಿಕಾರಿಗಳೇ ಇಂತಹ ತಪ್ಪು ಮಾಡಿದರೆ, ಸಾರ್ವಜನಿಕರಿಗೆ ಬುದ್ದಿ ಹೇಳುವುದು ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.
ಸಿಸಿಎಫ್ ದರ್ಜೆಯ ಅಧಿಕಾರಿಗಳ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಅರಣ್ಯ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


