ಕ್ರೀಡೆ ಸುದ್ದಿ

ಮೈಸೂರಿಗೆ ಮಹಾರಾಜ ಟ್ರೋಫಿ: ಕರುಣ್, ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ನಿಂದ ಗೆಲುವು

Share It

ಬೆಂಗಳೂರು: ನಾಯಕ ಕರುಣ್ ನಾಯರ್ ಮತ್ತು ಎಸ್‌.ಯು.ಕಾರ್ತಿಕ್ ಅವರ ಅರ್ಧಶತಕಗಳ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಫೈನಲ್​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಮೂರನೇ ಆವೃತ್ತಿಯ ಅಂತಿಮ​ ಹಣಾಹಣಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 45 ರನ್‌ಗಳ ಜಯದೊಂದಿಗೆ ಪ್ರಶಸ್ತಿ ಗೆದ್ದುಕೊಡಿದೆ. ಟಾಸ್​ ಗೆದ್ದು ಬೆಂಗಳೂರು ಬ್ಲಾಸ್ಟರ್ಸ್ ನಾಯಕ ಮಯಾಂಕ್​ ಅಗರ್ವಾಲ್​ ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಧಾರ ಕೈಗೊಂಡರು. ಬ್ಯಾಟಿಂಗ್​ಗಿಳಿದ ಮೈಸೂರು ವಾರಿಯರ್ಸ್, 29 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡಿತು.

ಕಾರ್ತಿಕ್​ ಸಿ.ಎ. 3 ರನ್​ಗೆ ಔಟಾದರು. ಆದರೆ ಬಳಿಕ ಒಂದಾದ ಎಸ್​.ಯು.ಕಾರ್ತಿಕ್ (44 ಎಸೆತಗಳಲ್ಲಿ 71 ರನ್​) ಹಾಗೂ ನಾಯಕ ಕರುಣ್ ನಾಯರ್​​ (45 ಎಸೆತಗಳಲ್ಲಿ 66 ರನ್​) ಭರ್ಜರಿ ಆಟವಾಡಿದರು. ಈ ಜೋಡಿ ಎರಡನೇ ವಿಕೆಟ್​ಗೆ 81 ರನ್​ ಸೇರಿಸಿತು.

ಕಾರ್ತಿಕ್ ಔಟಾದ ಬಳಿಕ ಅಬ್ಬರದ ಬ್ಯಾಟಿಂಗ್ ತೋರಿದ ಕರುಣ್ ನಾಯರ್ (66), ಅರ್ಧಶತಕ ಬಾರಿಸಿ ಮಿಂಚಿದರು. ಕೊನೆಯ ಹಂತದಲ್ಲಿ ಅಬ್ಬರಿಸಿದ ಮನೋಜ್ ಭಾಂಡಗೆ 13 ಎಸೆತಗಳಲ್ಲಿ 44 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 200 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ, ಮೈಸೂರು ವಾರಿಯರ್ಸ್ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 207 ರನ್​ ಮೊತ್ತ ಕಲೆ ಹಾಕಿತು.

ಬೆಂಗಳೂರು ಬ್ಲಾಸ್ಟರ್ಸ್ ವೈಫಲ್ಯ: 208 ರನ್​ಗಳ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ಆರಂಭದಲ್ಲೇ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. 26 ರನ್​ ಆಗುವಷ್ಟರಲ್ಲಿ ನಾಯಕ ಮಯಾಂಕ್​ (6) ಪ್ರಮುಖ ಸೇರಿ ಮೂವರು ಬ್ಯಾಟರ್​ಗಳು ಪೆವಿಲಿಯನ್​ ಸೇರಿದರು. ಈ ಹಂತದಲ್ಲಿ ಆರಂಭಿಕ ಆಟಗಾರ ಎಲ್​.ಆರ್​.ಚೇತನ್​ ಕೊಂಚ ಹೋರಾಟ ಪ್ರದರ್ಶಿಸಿ, ಅರ್ಧಶತಕ (51) ಬಾರಿಸಿದರೂ ಸಾಕಾಗಲಿಲ್ಲ.

ಅಂತಿಮ ಹಂತದಲ್ಲಿ ಅನಿರುದ್ಧ್​ ಜೋಶಿ 18 ರನ್,​ ಕ್ರಾಂತಿ ಕುಮಾರ್​ 39 ಹಾಗೂ ನವೀನ್​ ಎಂ.ಜಿ. 17 ರನ್​ ಗಳಿಸಿದರೂ ಸಹ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ಯಲಾಗಲಿಲ್ಲ. ತಂಡದ ಐವರು ಅಗ್ರ ಬ್ಯಾಟರ್​ಗಳು ಎರಡಂಕಿ ಮೊತ್ತವನ್ನೂ ತಲುಪದೇ ನಿರಾಸೆ ಮೂಡಿಸಿದರು.

20 ಓವರ್​ಗಳಲ್ಲಿ 8 ವಿಕೆಟ್​ಗೆ 162 ರನ್​ ಮಾತ್ರ ಗಳಿಸಲು ಶಕ್ತವಾದ ಬೆಂಗಳೂರು ಬ್ಲಾಸ್ಟರ್ಸ್, 45 ರನ್​ಗಳ ಸೋಲಿನೊಂದಿಗೆ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಮೈಸೂರು ವಾರಿಯರ್ಸ್ ಪರ ವಿದ್ಯಾಧರ್ ಪಾಟೀಲ್ 19ಕ್ಕೆ 3 ಹಾಗೂ ಕೆ.ಗೌತಮ್​ 23ಕ್ಕೆ 2 ವಿಕೆಟ್ ಕಬಳಿಸಿದರು.

ಬ್ಯಾಟಿಂಗ್​ನಲ್ಲಿ ಮಿಂಚಿದ ಎಸ್​.ಯು.ಕಾರ್ತಿಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕರುಣ್​ ನಾಯರ್​ ಪ್ಲೇಯರ್​ ಆಫ್​ ದಿ ಸಿರೀಸ್​ ಗೌರವಕ್ಕೆ ಪಾತ್ರರಾದರು.


Share It

You cannot copy content of this page